ಸಮಚಿತ್ತದ ರಾಜಕಾರಣಿ ಡಾ.ಜಿ.ಪರಮೇಶ್ವರ್: ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಬಣ್ಣನೆ

ಮೈಸೂರು,ಡಿಸೆಂಬರ್,25,2024 (www.justkannada.in):  ಸದ್ಯದ ಮಟ್ಟಿಗೆ ರಾಜಕಾರಣವೆಂದರೆ ಬೇಸರ ಹುಟ್ಟಿಸಿದೆ. ಆದರೆ ಅಲ್ಲೊಬ್ಬರು, ಇಲ್ಲೊಬ್ಬರು ವಿಭಿನ್ನವಾಗಿ ನಿಲ್ಲುತ್ತಾರೆ. ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಸಾಕ್ಷಿ. ತಮ್ಮ ಸಂಭಾವಿತ ನಡೆ-ನುಡಿಯಿಂದಲೇ ಯುವ ರಾಜಕಾರಣಗಳಿಗೆ ಮಾದರಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು.

ನಗರದ ಪ್ರೆಸ್ ಕ್ಲಬ್‌ ನಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ (ರಿ), ವತಿಯಿಂದ ಆಯೋಜಿಸಿದ್ದ 2025 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮಾತು ಮಿದುವಾದದ್ದು, ಸದ್ದು ಮಾಡುವುದಿಲ್ಲ. ಆದರೆ ಅವರ ಆಲೋಚನೆಗಳು ಸದ್ದು ಮಾಡುತ್ತವೆ. ಯಾವುದೇ ಸಂದರ್ಭದಲ್ಲೂ, ಯಾರೊಂದಿಗಾದರೂ ಸಹ ಸಮಚಿತ್ತದಿಂದ ಮಾತನಾಡುವ ಅವರು, ಈ ವಿಶಿಷ್ಟ ಕಲೆಯನ್ನು ಸಿದ್ದಿಸಿಕೊಂಡಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ್ ಅವರ ಪದ ಪ್ರಯೋಗ, ಮಾತುಗಾರಿಕೆ ನಿಜಕ್ಕೂ ಯುವ ರಾಜಕಾರಣಗಳಿಗೆ ಮಾದರಿ. ಈ ಕಾರಣದಿಂದಲೇ ಅವರು ರಾಜ್ಯದಾದ್ಯಂತ ಜನಪ್ರಿಯತೆ ಸಂಪಾದಿಸಿದ್ದಾರೆ ಎಂದರು.

ಅಲ್ಲದೆ ವಿರೋಧ ಪಕ್ಷದವರ ಏನೇ ಬೊಬ್ಬೆಯಿಡಬಹುದು ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿಲ್ಲ. ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ದಕ್ಷ ಮತ್ತು ಅನುಭವಪೂರ್ಣ ಆಡಳಿತ ವೈಖರಿಯೇ ಸಾಕ್ಷಿ ಎಂದು ಕೆ.ಎಚ್.ವೆಂಕಟೇಶ್ ಹೇಳಿದರು.

ಯಾವುದೇ ಸರ್ಕಾರವಿರಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿ ಯಾವುದೇ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಬಲು ಬೇಗೆ ಟೀಕೆಗೆ ಗುರಿಯಾಗುವವರು ಗೃಹ ಸಚಿವರಾದರು. ಆದರೆ ಪ್ರಸ್ತುತ ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಎಲ್ಲೂ ಸಹ ಕೋಮುಗಲಭೆಗೆ ಅವಕಾಶವೇ ಸೃಷ್ಟಿಯಾಗಿಲ್ಲ ಎಂದು ಹೇಳಿದರು.

ಮೂರನೇ ಬಾರಿ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್, ಸಂಭಾವಿತ ರಾಜಕಾರಣ ಯಾಗಿ, ನಡೆ-ನುಡಿ ಎರಡರಲ್ಲೂ ಮಾದರಿಯಾಗಿದ್ದಾರೆ. ಸುಮಾರು 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ,  ಹತ್ತಾರು ಇಲಾಖೆಗಳ ಸಚಿವರಾಗಿದ್ದಾರೆ. ಅಲ್ಲದೆ ಅವರು ಗೃಹಸಚಿವರಾಗಿ ಪೊಲೀಸ್ ಇಲಾಖೆಗೆ ಹಲವು ಸುಧಾರಿತ ಆವಿಷ್ಕಾರಗಳನ್ನು ಪರಿಚಯಿಸಿದ್ದಾರೆ. ಎಂತಹದ್ದೇ ಅಪರಾಧವಿರಲಿ ಬಹುತೇಕ ಸಂದರ್ಭದಲ್ಲಿ ತಪ್ಪಿತಸ್ಥರನ್ನು ಪತ್ತೆಹಚ್ಚುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಡಾ.ಜಿ.ಪರಮೇಶ್ವರ್ ಅವರ ಮಾರ್ಗದರ್ಶನ, ಮೇಲ್ವಿಚಾರಣೆ ಕಾರಣವಾಗಿದೆ. ಅಲ್ಲದೆ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು, ಸುಧಾರಿತ ಆವಿಷ್ಕಾರಗಳನ್ನು ಪರಿಚಯಿಸುವಲ್ಲಿ ಡಾ.ಜಿ.ಪರಮೇಶ್ವರ್ ಮುಂಚೂಣಿಯಲ್ಲಿದ್ದಾರೆ ಎಂದರು.

ಡಾ.ಜಿ.ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗಲೂ ಹಲವರ ವಿರೋಧದ ನಡುವೆಯೂ ಉನ್ನತ ಶಿಕ್ಷಣ ಕಾಯ್ದೆಯಂತಹ ಅತ್ಯುತ್ತಮವಾದ ಕಾಯ್ದೆಗಳನ್ನು ಜಾರಿಗೊಳಿಸುವಲ್ಲಿ ಶ್ರಮಿಸಿದ್ದಾರೆ. ಹತ್ತಾರು ಇಲಾಖೆಗಳ ಸಚಿವರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲು ಶ್ರಮಿಸಿದ್ದಾರೆ ಎಂದರು.

ಡಾ.ಜಿ.ಪರಮೇಶ್ವರ್ ಅವರು ಮೂಲತಃ ಕೃಷಿ ವಿಜ್ಞಾನಿ. ಇದೇ ಕ್ಷೇತ್ರದಲ್ಲಿ ಅವರು ಎತ್ತರಕ್ಕೆ ಹೋಗಬಹುದಿತ್ತು. ಆದರೂ ಸಮಾಜ ವಿಜ್ಞಾನಿಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ತಂದೆ ಚಿತ್ರಕಲಾ ಶಿಕ್ಷಕರಾಗಿದ್ದ ದಿ.ಎಚ್.ಎಂ. ಗಂಗಾಧರಯ್ಯ ಅವರು ಕಟ್ಟಿರುವ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಅದನ್ನು ರಾಜ್ಯದಾದ್ಯಂತ ವಿಸ್ತರಿಸಿದ್ದಾರೆ. ಇದರಿಂದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ ಎಂದು ಎಚ್.ಎ.ವೆಂಕಟೇಶ್ ತಿಳಿಸಿದರು.  ಈ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್ ಅವರ ಅಭಿಮಾನಿ ಗಳು ಕ್ಯಾಲೆಂಡರ್ ಬಿಡುಗಡೆ ಮಾಡಿರುವುದು ಅರ್ಥಪೂರ್ಣವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ದಿನದರ್ಶಿಕೆಯು ನಮ್ಮ ನಿತ್ಯ ಜೀವನದ ಭಾಗವಾಗಿದೆ. ಭಾರತೀಯ ಬಹಳ ಹಿಂದೆಯೇ ಹಲವು ಆವಿಷ್ಕಾರಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅನ್ನ ಚಲನಚಿತ್ರ ಖ್ಯಾತಿಯ ಸಾಹಿತಿ ಹನೂರು ಚೆನ್ನಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎನ್.ಮಂಜೇಶ್, ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ಜಿಲ್ಲಾಧ್ಯಕ್ಷ ಸಿ.ಮಂಜುನಾಥ್, ವಕೀಲ ಕುಮಾರ್, ಮುಖಂಡರಾದ ಈಶ್ವರ್ ಚಕ್ಕಡಿ, ಬಿ.ಎಲ್.ಪುಟ್ಟಸ್ವಾಮಿ ಇತರರು ಇದ್ದರು.

“ಹತ್ತಾರು ಎಕರೆಯಲ್ಲಿ ಭವನ ನಿರ್ಮಾಣವಾಗಲಿ”

ನಗರದ ಪ್ರಮುಖ ರಸ್ತೆ (ಕೆಆರ್‌ಎಸ್)ಯೊಂದಕ್ಕೆ ಸಿಎಂ ಸಿದ್ದರಾಮಯ್ಯ  ಅವರ ಹೆಸರಿಡುವುದರ ಸಂಬಂಧ ಈಚೆಗೆ ಪಾಲಿಕೆಯಲ್ಲಿ ನಡೆದ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಬರೀ ಒಂದು ರಸ್ತೆಗಲ್ಲ ನಗರದ ಹತ್ತಾರು ರಸ್ತೆಗಳಿಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡಬೇಕು. ಮುಖ್ಯವಾಗಿ ಹತ್ತಾರು ಎಕರೆಯಲ್ಲಿ ಭವನ ನಿರ್ಮಾಣವಾಗಬೇಕು. ಅಲ್ಲಿ ಸಿದ್ದರಾಮಯ್ಯ ಅವರ ಸುಮಾರು ನಲವತ್ತು ವರ್ಷದ ರಾಜಕಾರಣ, ಸಾಧನೆ, ಸಿದ್ದಾಂತ ಹಾಗೂ ತತ್ವಾದರ್ಶಗಳ ಚರ್ಚೆಯಾಗಬೇಕು ಎಂದು ಪ್ರತಿಪಾದಿಸಿದರು.

ಬಿಜೆಪಿಯವರು ಹಾಗೂ ಜೆಡಿಎಸ್‌ ನವರು ತಮ್ಮ ಒಳಮನಸ್ಸಿನಲ್ಲಿ ಸಿದ್ದರಾಮಯ್ಯ ಅವರ ಕೀರ್ತಿ, ಸಾಧನೆಗಳನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಅವರ ಅಪಾರ ಜನಪ್ರತಿಯತೆಯಿಂದಾಗಿ ಆತಂಕಗೊಂಡು ಇಂತಹವುಗಳನ್ನು ಬಹಿರಂಗವಾಗಿಯಷ್ಟೇ ವಿರೋಧಿಸುತ್ತಿದ್ದಾರೆ ಎಂದರು.

Key words: Dr. G. Parameshwar, balanced, politician, H.A. Venkatesh