ಬೆಂಗಳೂರು,ಅ,1,2019(www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು ಈ ನಡುವೆ ಮೇಯರ್ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಎಂ ಗೌತಮ್ ಕುಮಾರ್ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಅವರು ಮಂಗಳವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದರು ಕೂಡಾ. ಆದರೆ ಇದಾದ ಸ್ವಲ್ಪ ಸಮಯದ ನಂತರ ಪದ್ಮನಾಭ ರೆಡ್ಡಿಯವರು ಕೂಡಾ ಬಿಜೆಪಿ ಪಕ್ಷದಿಂದಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಗೌತಮ್ ಕುಮಾರ್ ಮನವೊಲಿಸಲು ಬಿಜೆಪಿ ನಾಯಕರಾದ ಆರ್.ಅಶೋಕ್ ಚರ್ಚೆ ನಡೆಸುತ್ತಿದ್ದಾರೆ.
ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ಮೂರು ಜನ ಬಿಬಿಎಂಪಿ ಸದಸ್ಯರಿಂದ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.
ಇನ್ನು ಮೇಯರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ದತ್ತಾತ್ರೇಯ ವಾರ್ಡ್ ಕಾರ್ಪೋರೇಟರ್ ಸತ್ಯನಾರಾಯಣ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಜೆಡಿಎಸ್ ನಿಂದ ಉಪಮೇಯರ್ ಸ್ಥಾನಕ್ಕೆ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ ಮೇಯರ್ ಸ್ಥಾನಕ್ಕೆ 3 ಅಭ್ಯರ್ಥಿಗಳು ಉಪ ಮೇಯರ್ ಸ್ಥಾನಕ್ಕೆ 4 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇಂದು ಬೆಳಗ್ಗೆ 8ರಿಂದ 9.30ರವರೆಗೆ ಪೂಜ್ಯ ಮಹಾಪೌರರು, ಉಪ ಮಹಾಪೌರರು ಹಾಗೂ 4 ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಕ್ಕೆ ನಾಮಪತ್ರಗಳ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.
ಇಂದು ಬೆಳಗ್ಗೆ 9.30ರಿಂದ 11.30ರವರೆಗೆ ಸದರಿ ಸ್ಥಾನಗಳಿಗೆ ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ. 11.30ಕ್ಕೆ ಪೂಜ್ಯ ಮಹಾಪೌರರು, ಉಪ ಮಹಾಪೌರರು ಹಾಗೂ 4 ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳ ಚುನಾವಣೆ ಪ್ರಕ್ರಿಯೆ ಶುರುವಾಗಲಿದೆ.
Key words: bbmp- mayor-Nominations –BJP- two candidates