ಶಾಲೆಗಳಿಗೆ 23 ಬಾಂಬ್ ಬೆದರಿಕೆ ಇ- ಮೇಲ್: ವಿದ್ಯಾರ್ಥಿಯ ಬಂಧನ

ನವದೆಹಲಿ,ಜನವರಿ,10,2025 (www.justkannada.in): ನವ ದೆಹಲಿಯ ಶಾಲೆಗಳಿಗೆ 23 ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ದೆಹಲಿಯ ವಿವಿಧ ಶಾಲೆಗಳಿಗೆ ಕಳುಹಿಸಲಾದ ಕೊನೆಯ 23 ಬಾಂಬ್ ಬೆದರಿಕೆ ಇಮೇಲ್ ಗಳನ್ನು 12 ನೇ ತರಗತಿಯ ವಿದ್ಯಾರ್ಥಿ ಕಳುಹಿಸಿದ್ದಾನೆ ಎಂದು ಪೊಲೀಸರು ಇಂದು ಬಹಿರಂಗಪಡಿಸಿದ್ದಾರೆ.

ದೆಹಲಿಯ ವಿವಿಧ ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆಯ ಹಿಂದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಕೈವಾಡವಿದೆ ಎಂಬುದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ತಾನು ಈ ಹಿಂದೆಯೂ ಬೆದರಿಕೆ ಇಮೇಲ್‌ ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.

ಇತ್ತೀಚೆಗೆ ಕಳೆದ ಕೆಲವು ತಿಂಗಳಿನಿಂದ ದೆಹಲಿಯ ಹಲವು ಶಾಲೆಗಳಿಗೆ ಸಾಲು ಸಾಲು ಬಾಂಬ್ ಬೆದರಿಕೆ ಸಂದೇಶ ಬರುತ್ತಿತ್ತು. ಘಟನೆ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಪ್ರಕರಣದ  ಮೂಲ ಪತ್ತೆ ಹಚ್ಚಿದ ಪೊಲೀಸರಿಗೆ ಇದೀಗ ಶಾಕ್ ಆಗಿದ್ದು, ತಾನೇ ಬಾಂಬ್ ಬೆದರಿಕೆ ಹಾಕಿರುವುದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ದೆಹಲಿಯ ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದನು ಎಂದು ತಿಳಿದು ಬಂದಿದೆ.

ಮದರ್ಸ್ ಇಂಟರ್‌ ನ್ಯಾಷನಲ್ ಸ್ಕೂಲ್, ಮಾಡರ್ನ್ ಸ್ಕೂಲ್, ಸ್ಪ್ರಿಂಗ್‌ಡೇಲ್ ಸ್ಕೂಲ್, ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್, ಸೇಂಟ್ ಕೊಲಂಬಾಸ್ ಸ್ಕೂಲ್, ಸಲ್ವಾನ್ ಪಬ್ಲಿಕ್ ಸ್ಕೂಲ್, ಅಮಿಟಿ ಇಂಟರ್‌ನ್ಯಾಶನಲ್ ಸ್ಕೂಲ್, ಏರ್ ಫೋರ್ಸ್ ಬಾಲ್ ಭಾರತಿ, ವಸಂತ್ ವಿಹಾರ್‌ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ಮತ್ತು ಆರ್‌ಕೆ ಪುರಂಗೆ ಇಮೇಲ್ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ವಿದ್ಯಾರ್ಥಿಯನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Key words: 23 bomb threats,  schools, Student, arrested