ಮೈಸೂರು, ಜನವರಿ,10,2025 (www.justkannada.in): ಬಿಜೆಪಿಯಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಬಿಜೆಪಿ ನಗರಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಲಾಗಿದೆ.
ಹಿಂದೂಪರ ಹೋರಾಟಗಾರ ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ಮೈ.ಕಾ ಪ್ರೇಮ್ ಕುಮಾರ್ ಅವರು 12 ಕಾರಣಗಳನ್ನು ನೀಡಿ ಸುದೀರ್ಘ ಪತ್ರ ಬರೆದು ಮಾಜಿ ಸಂಸದ ಪ್ರತಾಪ್ ಸಿಂಹ ಉಚ್ಚಾಟನೆಗೆ ಮನವಿ ಮಾಡಿದ್ದಾರೆ.
ಸಂಸತ್ ಮೇಲೆ ಸ್ಮೋಕ್ ಬಾಂಬ್ ಹಾಕಿದವರಿಗೆ ಪೂರ್ವಪರ ವಿಚಾರಿಸದೆ ಪಾಸ್ ವಿತರಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉದ್ದೇಶ ಪೂರ್ವಕವಾಗಿ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಚಾರ ಮಾಡಿಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ನ್ಯಾಯವಾದಿಗಳ ವಿರುದ್ದ ಹೇಳಿಕೆ ನೀಡಿ ಪಕ್ಷಕ್ಕೆ ಹಿನ್ನಡೆಯಾಗುವಂತೆ ಮಾಡಿದರು.
ಹಾಗೆಯೇ ಸಂಸದರ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ವಿರುದ್ದ ಅಪಪ್ರಚಾರದ ಹೇಳಿಕೆ ನೀಡಿದರು. ಬಳಿಕ ಪಕ್ಷದ ಬ್ಯಾನರ್ ಹೊರತುಪಡಿಸಿ ವಕ್ಫ್ ಹೋರಾಟಕ್ಕೆ ಮುಂದಾದರು. ಪಕ್ಷದ ನಾಯಕರ ವಿರುದ್ದ ಬಹಿರಂಗ ಹೇಳಿಕೆ ನೀಡಿದ್ದಾರೆ. ಹೀಗೆ ಹಲವಾರು ಕಾರಣ ನೀಡಿ ಪ್ರತಾಪ್ ಸಿಂಹ ಉಚ್ಚಾಟನೆಗೆ ಆಗ್ರಹಿಸಿದ್ದಾರೆ. ಪಕ್ಷದ ವರಿಷ್ಠರ ಗಮನಕ್ಕೆ ತಂದು ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಗರಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಿಗೆ ಮೈ.ಕಾ ಪ್ರೇಮ್ ಕುಮಾರ್ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೈ.ಕಾ ಪ್ರೇಮ್ ಕುಮಾರ್, ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನ ಸಂಸದ ಪ್ರತಾಪ್ ಸಿಂಹ ಮಾಡುತ್ತಿದ್ದಾರೆ. ಮಾಜಿಯಾದರೂ ಹಾಲಿ ಸಂಸದರಿಗೆ ಮುಜುಗರ ತರುವ ನಿಟ್ಟಿನಲ್ಲಿ ಕೇಂದ್ರದ ಮಂತ್ರಿಗಳ ಭೇಟಿ ಮಾಡುವುದು ನಾನು ಅದು ಮಾಡಿದೆ, ಇದು ಮಾಡಿದೆ ಅಂತ ಹೇಳಿಕೊಂಡು ಹಾಲಿ ಸಂಸದರಿಗೆ ಕೆಲಸವೇ ಗೊತ್ತಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಜೊತೆಗೆ ಪಕ್ಷದಲ್ಲಿ ಒಂದು ರೀತಿ ಸೋತು ಮನೆಯಲ್ಲಿ ಕೂತಿದ್ದರೂ ಚಾಲ್ತಿಯಲ್ಲಿರಬೇಕು ಎಂಬ ಭ್ರಮೆಯಲ್ಲಿದ್ದಾರೆ. ಇವರು ಬಿಜೆಪಿ ರಾಜ್ಯಾಧ್ಯಕ್ಷರ ವಿಜಯೇಂದ್ರ ವಿರುದ್ಧ ಇರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲೂ ಹೋಗಿ ಅಲ್ಲೂ ಕಡ್ಡಿ ಅಲ್ಲಾಡಿಸುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
ಮೈಸೂರಿನಲ್ಲಿ ಪ್ರಿನ್ಸಸ್ ರಸ್ತೆ ಹೆಸರೇ ಇಲ್ಲ ಅಂತ ಹೇಳುತ್ತಾರೆ. ನಂತರ ಉಲ್ಟಾ ಹೇಳಿಕೆ ನೀಡುತ್ತಾರೆ. ಇವರೊಬ್ಬ ಪತ್ರಕರ್ತರಾಗಿದ್ದೂ ಪ್ರಿನ್ಸಸ್ ರಸ್ತೆ ಹೆಸರು ಇರುವುದು ಗೊತ್ತಿಲ್ಲವಾ ಇವರಿಗೆ. ಜೊತೆಗೆ ಪಾರ್ಟಿಯನ್ನ ಸಾಕಷ್ಟು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಾರೆ. ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದಿದ್ದರೂ ಬಂದು ಬಿಲ್ಡಪ್ ತೆಗೆದುಕೊಳ್ಳುತ್ತಾರೆ. ಇವರ ನಡವಳಿಕೆ ಬಹಳ ಬೇಸರ ತಂದಿದೆ. ಇವರಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ಹಾಗಾಗಿ ಇವರನ್ನ ಪಕ್ಷದಿಂದ ವಜಾ ಮಾಡಬೇಕು ಎಂದು ನಾನು ಬಿಜೆಪಿ ನಗರ ಘಟಕ ಮತ್ತು ಗ್ರಾಮಾಂತರ ಘಟಕ ಅಧ್ಯಕ್ಷ ಇಬ್ಬರಿಗೂ ಮನವಿ ಪತ್ರ ಕೊಟ್ಟಿದ್ದೇನೆ . ಇದರ ಜೊತೆ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ದೂರು ಕೊಡಲು ಹೋಗುತ್ತಿದ್ದೇನೆ ಎಂದು ಮೈ.ಕಾ ಪ್ರೇಮ್ ಕುಮಾರ್ ಹೇಳಿದ್ದಾರೆ.
Key words: Demand, Pratap Simha , Expulsion, BJP