KSOU: ಬ್ಯಾಂಕಿಂಗ್‌ ಪರೀಕ್ಷೆಗೆ ಉಚಿತ ತರಬೇತಿ: ಕೂಡಲೇ ನೋಂದಾಯಿಸಿಕೊಳ್ಳಿ

ಮೈಸೂರು,ಜನವರಿ,10,2025 (www.justkannada.in): ಬಿಕಾಂ ಇಲ್ಲವೇ ಎಂಬಿಎ ಪದವೀಧರರು ನೀವಾಗಿದ್ದೀರಾ, ಇಲ್ಲವೇ ಕೃಷಿ ಸಹಿತ ಯಾವುದೇ ವಿಷಯದಲ್ಲಿ ಪದವಿ ಮುಗಿಸಿ ನೀವು ಬ್ಯಾಂಕಿಂಗ್‌ ಪರೀಕ್ಷೆಗಳು ಎದುರಿಸಲು ಅಣಿಯಾಗುತ್ತೀದ್ದೀರಾ, ಇದಕ್ಕಾಗಿ ಸೂಕ್ತ ತರಬೇತಿ ಎಲ್ಲಿ ಸಿಗಬಹುದು ಎನ್ನುವ ಹುಡುಕಾಟದಲ್ಲಿದ್ದೀರಾ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು 45 ದಿನಗಳ ತರಬೇತಿಯನ್ನು ನೀಡಲು ಸಿದ್ದತೆ ಮಾಡಿಕೊಂಡಿದೆ. ಉಚಿತವಾಗಿ ಎಸ್‌ಬಿಐ ಸಹಿತ ವಿವಿಧ ಬ್ಯಾಂಕ್‌ ಗಳ ಗುಮಾಸ್ತರು ಹಾಗೂ ಅಧಿಕಾರಿಗಳ ಹುದ್ದೆಗಳ ಪರೀಕ್ಷೆಗೆ ತರಬೇತಿಯನ್ನು ನೀಡಲಿದೆ.

ಬ್ಯಾಂಕಿಂಗ್‌ ಹುದ್ದೆಗಳ ಆಯ್ಕೆಗೆ ನಡೆಯುವ ಪರೀಕ್ಷೆಗಳು ಕೊಂಚ ಭಿನ್ನವೇ. ಇತರೆ ಪ್ರವೇಶ ಪರೀಕ್ಷೆಗಳಂತೆ ಇದಲ್ಲ. ಇದಕ್ಕಾಗಿ ತರಬೇತಿಯೂ ಭಿನ್ನವಾಗಿರಲಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಈಗಾಗಲೇ ಹಲವು ಬಾರಿ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ನೀಡಿದೆ. ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿ ವಿವಿಧ ಬ್ಯಾಂಕ್‌ ಗಳಲ್ಲಿ ಕೆಲಸವನ್ನೂ ಮಾಡುತ್ತಿದ್ದಾರೆ. ಅದೇ ಅನುಭವದ ಆಧಾರದ ಮೇಲೆ ತಜ್ಞರು, ಅನುಭವಸ್ಥರ ತಂಡದೊಂದಿಗೆ ಕರಾಮುವಿ ಈ ಬಾರಿಯೂ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ನೀಡಲಿದೆ.

14 ವರ್ಷದ ಹಿಂದೆ ಕೇಂದ್ರ ಆರಂಭ

ಮೂರು ದಶಕದಷ್ಟು ಇತಿಹಾಸ ಹೊಂದಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ದೂರ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುತ್ತಿದೆ. ಹದಿಮೂರು ವರ್ಷದ ಹಿಂದೆಯೇ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಆಗಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಕಾಲದಲ್ಲಿ ಆರಂಭಿಸಲಾಗಿತ್ತು. ಆಗಿನಿಂದಲೂ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ಉಚಿತ ತರಬೇತಿಯನ್ನು ನೀಡುತ್ತಾ ಬರಲಾಗುತ್ತಿದೆ. ಅದರಲ್ಲೂ ಯುಪಿಎಸ್ಸಿ ನಡೆಸುವ ಪರೀಕ್ಷೆಗಳು, ಕೆಪಿಎಸ್‌ ಸಿ ಆಯೋಜಿಸುವ ವಿವಿಧ ಹುದ್ದೆಗಳ ಪರೀಕ್ಷೆಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದಲ್ಲದೇ ಯುಜಿಸಿ ನೆಟ್‌ ಕೆ ಸ್ಲೆಟ್‌, ಬ್ಯಾಂಕಿಂಗ್‌, ಪಿಡಿಒ ಸಹಿತ ವಿವಿಧ ಸರ್ಕಾರಿ ನೇಮಕಾತಿಗಳ ಪ್ರವೇಶ ಪರೀಕ್ಷೆಗೂ ಇಲ್ಲಿ ತರಬೇತಿ ಮುಂದುವರಿದಿದೆ. ಬ್ಯಾಂಕಿಂಗ್‌ ಪ್ರವೇಶ ಪರೀಕ್ಷೆಗಳಿಗೂ ಹೆಚ್ಚಿನ ತರಬೇತಿಗಳು ಈ ಕೇಂದ್ರದಲ್ಲಿ ಹಿಂದೆ ನಡೆದಿವೆ. ಇದಕ್ಕಾಗಿಯೇ ಮೈಸೂರಿನ ಮುಕ್ತ ಗಂಗೋತ್ರಿ ಆವರಣದಲ್ಲಿ ರೂಪಿಸಿರುವ ಕೇಂದ್ರದಲ್ಲಿ ನಿರಂತರವಾಗಿ ಆಯಾ ಸಮಯದ ಪರೀಕ್ಷೆಗಳಿಗೆ ಅನುಗುಣವಾಗಿ ತರಬೇತಿ ರೂಪಿಸುತ್ತದೆ.

ಹೀಗಿರಲಿದೆ ತರಬೇತಿ

ಈ ಬಾರಿಯೂ ಬ್ಯಾಂಕಿಂಗ್‌ ಪರೀಕ್ಷೆಗೆ ದಿನಾಂಕಗಳನ್ನು ನಿಗದಿಪಡಿಸಲಾಗುತ್ತಿದೆ. ಅರ್ಜಿಗಳನ್ನು ಆಹ್ವಾನಿಸಿದ್ದು ಹಲವರು ಅರ್ಜಿಯನ್ನೂ ಹಾಕಿದ್ದಾರೆ. ಇದಕ್ಕಾಗಿ ಅಭ್ಯರ್ಥಿಗಳು ತಯಾರಿಯನ್ನು ನಡೆಸುತ್ತಿದ್ದು, ಅಂತಿಮ ಪರೀಕ್ಷೆಗೆ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಉಚಿತ ತರಬೇತಿ ನೀಡಲಿದೆ.

ಬ್ಯಾಂಕ್‌ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು. ಈಗಾಗಲೇ ವಿವಿಧ ಬ್ಯಾಂಕ್‌ ಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವವರು, ವಿಷಯ ತಜ್ಞರು ನಿತ್ಯ ಮೂರು ಗಂಟೆಗಳ ಕಾಲ ತರಬೇತಿ ನೀಡಲಿದ್ದಾರೆ. ಅದರಲ್ಲೂ ಪರೀಕ್ಷೆಗೆ ಬೇಕಾದ ಮಾದರಿಯಲ್ಲಿಯೇ ತರಬೇತಿ ಪರಿಣಾಮಕಾರಿಯಾಗಿ ನೀಡಲಾಗುತ್ತದೆ. ನಿವೃತ್ತ ಬ್ಯಾಂಕ್‌ ಅಧಿಕಾರಿಗಳು, ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿನ ವಿವಿಧ ವಿಷಯಗಳ ತಜ್ಞರು ಈ ಕೇಂದ್ರದೊಂದಿಗೆ ಒಡನಾಟ ಹೊಂದಿದ್ದು ವಿಷಯ ತಜ್ಞರಾಗಿ ಭಾಗಿಯಾಗಲಿದ್ಧಾರೆ. ಇದಲ್ಲದೇ ವಿಷಯಕ್ಕೆ ಸಂಬಂಧಿಸಿ ಅಭ್ಯರ್ಥಿಗಳಿಗೆ ಅನುಮಾನಗಳಿದ್ದರೆ ಅದನ್ನೂ ಬಗೆಹರಿಸಲು ಸಂವಾದಗಳನ್ನು ಆಯೋಜಿಸಲಾಗುತ್ತದೆ.

ಉಂಟು ಗ್ರಂಥಾಲಯ

ಕರಾಮುವಿಯಲ್ಲಿ ನಡೆಯುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ವಿಶಾಲ ಗ್ರಂಥಾಲಯ ವ್ಯವಸ್ಥೆಯೂ ಇದೆ. ಇಲ್ಲಿ ಎಲ್ಲಾ ವಿಷಯಗಳ ಸಾಕಷ್ಟು ಪುಸ್ತಕಗಳು ಸಿಗಲಿವೆ. ಇದಲ್ಲದೇ ಹಾಸ್ಟೆಲ್‌ ವ್ಯವಸ್ಥೆಯನ್ನೂ ಕೂಡ ಮಾಡಿಕೊಡಲಾಗುತ್ತದೆ. ಕಡಿಮೆ ದರದಲ್ಲಿ ವಿದ್ಯಾರ್ಥಿ ಆಶ್ರಯ ವ್ಯವಸ್ಥೆಯನ್ನು ವಿವಿ ಮಾಡಿಕೊಂಡು ಬಂದಿದೆ.

ಒಂದೂವರೆ ತಿಂಗಳ ಕಾಲ ಬ್ಯಾಂಕಿಂಗ್‌ ಪರೀಕ್ಷೆ ತರಬೇತಿ ತರಗತಿಗಳಿಗೆ ಸಿದ್ದತೆಗಳು ಆಗಿವೆ. ಹಿಂದೆಯೂ ಹಲವಾರು ರೀತಿಯ ಪರೀಕ್ಷೆಗಳಿಗೆ ತರಬೇತಿ ನೀಡಿದ್ದೇವೆ. ಕುಲಪತಿ ಪ್ರೊ.ಶರಣಪ್ಪ ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮತ್ತಿತರರ ಸಹಕಾರದಿಂದ ಕೇಂದ್ರದಲ್ಲಿ ನಡೆದಿರುವ ತರಬೇತಿ ಪ್ರಯೋಜನ ಪಡೆದವರು ಉದ್ಯೋಗ ಪಡೆದುಕೊಂಡಿದ್ದಾರೆ ಎನ್ನುವುದು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಅವರ ವಿವರಣೆ.

ಉದ್ಘಾಟನೆಗೆ ಸಿದ್ದತೆ

ಬ್ಯಾಂಕ್‌ ಪರೀಕ್ಷೆ ತರಬೇತಿಗೆ ಮೈಸೂರಿನ ಕರಾಮುವಿ ಕಾವೇರಿ ಸಭಾಂಗಣದಲ್ಲೇ ತರಬೇತಿಗಳು ಶುರುವಾಗಲಿವೆ. ಸಂಕ್ರಾಂತಿ ನಂತರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಅಂದಿನಿಂದಲೇ ತರಗತಿಗಳು ಶುರುವಾಗಲಿವೆ. ಸತತ ಒಂದೂವರೆ ತಿಂಗಳ ಕಾಲ ನಿರಂತರವಾಗಿ ನೀಡಲಾಗುತ್ತದೆ.

ಸಂಪರ್ಕ ಹೇಗೆ

ಇಡೀ ಒಂದು ತಿಂಗಳ ನೋಂದಣಿಗೆ 500 ರೂ.ಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಆಸಕ್ತರು ಹೆಸರನ್ನು ನೊಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಅವರನ್ನು 9448800816 ಇಲ್ಲವೇ ಕಚೇರಿಯನ್ನು ದೂರವಾಣಿ ಸಂಖ್ಯೆ 0821 2515944ಗೆ  ಸಂಪರ್ಕಿಸಬಹುದು.

Key words: Mysore, KSOU,  Free coaching, banking exams