ಬೆಂಗಳೂರು,ಜನವರಿ,10,2025 (www.justkannada.in): ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಕರ್ನಾಟಕ ಪ್ರವಾಸೋದ್ಯಮ ಮತ್ತು ಕೆಎಸ್ ಟಿಡಿಸಿ ಸಹಯೋಗದಲ್ಲಿ ಬೀದಿಬದಿ ಮತ್ತು ಡಾಬಾ ಆಹಾರ ವ್ಯಾಪಾರಿಗಳಿಗೆ ಜನವರಿ 9 ಮತ್ತು 10 ರಂದು ಎರಡು ದಿನಗಳ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವಿನೂತನ ಕಾರ್ಯಕ್ರಮದಲ್ಲಿ ಆಹಾರದ ಸುರಕ್ಷತೆ ಮತ್ತು ನೈರ್ಮಲ್ಯತೆಗೆ ಸಂಬಂಧಿಸಿದಂತೆ ಬೀದಿ ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆ, ಪ್ರವಾಸಿಗರೊಂದಿಗೆ ವ್ಯವಹರಿಸುವ ವಿಧಾನ ಮತ್ತು ಉತ್ತಮ ಸೇವೆ ನೀಡುವ ಬಗ್ಗೆ ಅತಿಥಿ ಸತ್ಕಾರದ ಮಾರ್ಗದರ್ಶನ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಪರಿಸರ ಸ್ನೇಹಿ ಆಚರಣೆಗಳ ಜಾಗೃತಿ ಮತ್ತು ಆಹಾರ ಗುಣಮಟ್ಟ ಕಾಪಾಡುವ ವಿಧಾನಗಳು ಮತ್ತು ನಿಯಮಗಳ ಬಗ್ಗೆ ಕುರಿತು ವಿಶೇಷ ತರಬೇತಿಯನ್ನು ನೀಡಲಾಯಿತು.
ಪ್ರವಾಸೋದ್ಯಮದ ಜಂಟಿ ನಿರ್ದೇಶಕರಾದ ಸವಿತಾ ಎಂ.ಕೆ ಅವರು ಮಾತನಾಡಿ ” ನಮ್ಮ ಬೀದಿ ಆಹಾರ ಸಂಸ್ಕೃತಿ ಕರ್ನಾಟಕದ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದೆ. ಈ ತರಬೇತಿ ಕಾರ್ಯಕ್ರಮದ ಮೂಲಕ ನಾವು ಪ್ರವಾಸಿಗರಿಗೆ ಸುರಕ್ಷಿತ ಮತ್ತು ನೈರ್ಮಲ್ಯ ವಿವಿಧ ಆಹಾರ ಸೇವೆಯನ್ನು ಖಾತ್ರಿಪಡಿಸುತ್ತಿದ್ದೇವೆ” ಎಂದು ತಿಳಿಸಿದರು.
ಈ ಕಾರ್ಯಕ್ರಮದ ಮೂಲಕ 48 ಬೀದಿಬದಿ ಮತ್ತು ಡಾಬಾ ಆಹಾರ ವ್ಯಾಪಾರಿಗಳು ಲಾಭ ಪಡೆದಿದ್ದಾರೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ವ್ಯಾಪಾರಿಗಳಿಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ ಎಂ ಕೆ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಐಎಚ್ಎಂ ನ ಎಂ.ವಿ ಸುರೇಶ್ ಮತ್ತು ರಾಣಾಜಾಯ್ ಚೌದ್ರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಭುಸ್ವಾಮಿ ವಿ. ಎಂ ಅವರು ಉಪಸ್ಥಿತರಿದ್ದರು.
Key words: Special training, street, dhaba food vendor