ಬೆಂಗಳೂರು,ಜನವರಿ,11,2025 (www.justkannada.in): ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮತ್ತು ಮಂಜೂರಾತಿ ನಕ್ಷೆ ಉಲ್ಲಂಘನೆಯನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಕೆಲ ಕ್ರಮ ಕೈಗೊಳ್ಳುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮಕ್ಕೆ ಬಿಬಿಎಂಪಿ ಆದೇಶಿಸಿದೆ.
ಈ ಕುರಿತು ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಬಿಬಿಎಂಪಿ ಮುಖ್ಯ ಆಯುಕ್ತರು, ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕೈಗೊಳ್ಳುವ ಪೂರ್ವದಲ್ಲಿ ಪಾಲಿಕೆಯಿಂದ ನಕ್ಷೆ ಮಂಜೂರಾತಿ ಮತ್ತು ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಪಾಲಿಕೆಯಿಂದ ಮಂಜೂರಾತಿ ಪಡೆಯದೆ ಆನಧಿಕೃತವಾಗಿ ಕಟ್ಟಡ ನಿರ್ಮಾಣ ಕೈಗೊಂಡಲ್ಲಿ ಅಂತಹ ನಿರ್ಮಾಣಗಳನ್ನು ತಡೆಗಟ್ಟಲು ಹಾಗೂ ಮಂಜೂರಾತಿ ನಕ್ಷೆ ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಾಯ್ದೆ-2020ರ ಅವಕಾಶಗಳಂತೆ ಪಾಲಿಕೆಯಿಂದ ಕ್ರಮಜರುಗಿಸಲಾಗುತ್ತಿದೆ. ಉಲ್ಲೇಖಿತ ಸುಪ್ರೀಂಕೋರ್ಟ್ ಆದೇಶದಲ್ಲಿ ಮಂಜೂರಾತಿ ನಕ್ಷೆ ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳು ಹಾಗೂ ಅನಧಿಕೃತವಾಗಿ ನಿರ್ಮಿಸುವ ಕಟ್ಟಡಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶಿಸಲಾಗಿದೆ.
“ವಿದ್ಯುತ್, ನೀರು ಸರಬರಾಜು, ಒಳಚರಂಡಿ ಸಂಪರ್ಕ, ಇತ್ಯಾದಿಗಳಂತಹ ಎಲ್ಲಾ ಅಗತ್ಯ ಸೇವಾ ಸಂಪರ್ಕಗಳನ್ನು ಸೇವಾ ಪೂರೈಕೆದಾರರು/ಮಂಡಳಿಯು ಕಟ್ಟಡಗಳಿಗೆ ಪೂರ್ಣಗೊಳಿಸಿದ/ಉದ್ಯೋಗ ಪ್ರಮಾಣಪತ್ರವನ್ನು ಸಲ್ಲಿಸಿದ ನಂತರವೇ ನೀಡಬೇಕು”.
ಮೇಲ್ಕಂಡಂತೆ ಘನ ಸರ್ವೋಚ್ಚ ನ್ಯಾಯಾಲಯದ ಆದೇಶದ ಅನುಸಾರ ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ವಿದ್ಯುತ್ ಸಂಪರ್ಕ ನೀಡುವ ಪೂರ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕವನ್ನು ನೀಡಲು ಕ್ರಮವಹಿಸಬೇಕಾಗಿದೆ.
ಆದುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ/ಮಂಜೂರಾತಿ ನಕ್ಷೆ ಉಲ್ಲಂಘನೆಗಳನ್ನು ಪರಿಣಾಮಕಾರಿಯಾಗಿ ತಡೆಯಲು ಬೆಂಗಳೂರು ವಿದ್ಯುತ್ ಸರಬರಾಜು ನಿಗಮವುಈ ಕೆಳಕಂಡಂತೆ ಕ್ರಮಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
1) ಕಟ್ಟಡ ನಿರ್ಮಾಣ ಹಂತದಲ್ಲಿ/ಪೂರ್ವದಲ್ಲಿ ತಾತ್ಕಾಲಿಕ ಸಂಪರ್ಕ ನೀಡಬೇಕಾದಲ್ಲಿ ಪಾಲಿಕೆಯಿಂದ ನೀಡಲಾಗಿರುವ ‘ಎ’ ಖಾತಾ ಹಾಗೂ ಅಂತಹ ಕಟ್ಟಡಗಳ ನಿರ್ಮಾಣಕ್ಕೆ ಪಾಲಿಕೆಯಿಂದ ನಕ್ಷೆ ಮಂಜೂರಾತಿ ನೀಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು
2) ಯಾವುದೇ ಕಟ್ಟಡಕ್ಕೆ ಬಿಬಿಎಂಪಿ ಕಾಯ್ದೆ 2020 ರ ಕಲಂ 248(3) ರಡಿಯಲ್ಲಿ ಆದೇಶ ಹೊರಡಿಸಿದ ನಂತರ ಕಟ್ಟಡಕ್ಕೆ ಶಾಶ್ವತ/ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು.
3) ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ಯಾವುದೇ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ಸಂಪರ್ಕ ನೀಡುವ ಪೂರ್ವದಲ್ಲಿ ಅಂತಹ ಕಟ್ಟಡಕ್ಕೆ ಪಾಲಿಕೆಯಿಂದ ಪೂರ್ಣತಾ ಪ್ರಮಾಣ ಪತ್ರ/ಸ್ವಾಧಿನಾನುಭವ ಪ್ರಮಾಣ ಪತ್ರ ನೀಡಲಾಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು.
4) ಪಾಲಿಕೆಯಿಂದ ನೀಡಿರುವ ನಕ್ಷೆ ಮಂಜೂರಾತಿಯ ಸಿಂಧುತ್ವ ಅವಧಿಯು ಮುಗಿದ ನಂತರ, ಅಂತಹ ಕಟ್ಟಡಕ್ಕೆ ತಾತ್ಕಾಲಿಕ ಸಂಪರ್ಕ ಮುಂದುವರೆಸಬೇಕಾದಲ್ಲಿ ಕಟ್ಟಡ ನಕ್ಷೆ ಮಂಜೂರಾತಿಯನ್ನು ಪಾಲಿಕೆಯಿಂದ ನವೀಕರಿಸಿರುವುದನ್ನು ದೃಢಿಕರಿಸಿಕೊಳ್ಳಬೇಕು ಎಂದು ಬೆಸ್ಕಾಂಗೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
Key words: BBMP, BESCOM, unauthorized, construction