ಮೈಸೂರು,ಜನವರಿ,13,2025 (www.justkannada.in): ಹೆಂಡತಿಯನ್ನು ಹೆರಿಗೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿ ಮೈಸೂರಿನ ಚಲುವಾಂಬ ಆಸ್ಪತ್ರೆ ಆವರಣದಲ್ಲಿ ಮಲಗಿದ್ದಾಗ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ನಾಗೇಶ್ (47) ಮೃತ ವ್ಯಕ್ತಿ. ನಾಗೇಶ್ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆ ಮುಂದೆ ಮಲಗಿದ್ದರು. ಬೆಳಿಗ್ಗೆ 7 ಗಂಟೆ ಸುಮಾರಿಗೆ ನೋಡಿದಾಗ ಮೃತಪಟ್ಟಿದ್ದಾರೆ. ಕೊರೆಯುವ ಚಳಿ ತಡೆಯಲಾರದೆ ಮೃತಪಟ್ಟಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಮಗು ಹುಟ್ಟಿದ ಮಾರನೇ ದಿನಕ್ಕೆ ತಂದೆ ನಾಗೇಶ್ ಸಾವಿಗೀಡಾಗಿದ್ದು, ಸಿಬ್ಬಂದಿಯು ಮೃತದೇಹಕ್ಕೆ ಬೆಡ್ ಶೀಟ್ ಹೊದಿಸಿ ಬ್ಯಾರಿಕೇಡ್ ಎಳೆದಿದ್ದಾರೆ. ಇನ್ನು ಹೆರಿಗೆಗೆಂದು ಹೆಂಡತಿಯನ್ನು ನಾಗೇಶ್ ಶುಕ್ರವಾರ ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಗಲ್ಲ ಅಂತ ಚಲುವಾಂಬ ಆಸ್ಪತ್ರೆಗೆ ಕಳುಹಿಸಿದ್ದರು. ಶನಿವಾರ ಹೆರಿಗೆ ಆಗಿದ್ದು, ನಾಗೇಶ್ ಹೊರಗಡೆ ಮಲಗಿದ್ದರು. ನಾಗೇಶ್ ಗೆ ಸ್ವಲ್ಪ ಕುಡಿಯುವ ಚಟ ಇತ್ತು ಏನಾದರೂ ಹೆಚ್ಚು ಕುಡಿದು ಮಲಗಿದ್ದಲ್ಲೇ ಸಾವಾಗಿರಬಹುದೇ ಎಂಬುದು ಗೊತ್ತಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಸುಧಾ, ಸೀರಿಯಸ್ ಕೇಸ್ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಶುಕ್ರವಾರ ಹೆಂಡತಿಯನ್ನು ತಂದು ದಾಖಲು ಮಾಡಿದ್ದರು. ಈ ಮಧ್ಯೆ ಹೆಂಡತಿ ಜೊತೆ ಅವರೊಬ್ಬರೆ ಬಂದಿದ್ದು, ಆಸ್ಪತ್ರೆ ಆವರಣದಲ್ಲಿ ಮಲಗಿದ್ದರು. ಆದರೆ ಅವರು ಮಲಗಿದ್ದಲ್ಲೇ ಸಾವನ್ನಪ್ಪಿದ್ದು, ಈ ಬಗ್ಗೆ ಈಗ ನಾವು ಪೋಲಿಸರಿಗೆ ಮಾಹಿತಿ ತಿಳಿಸಿದ್ದೇವೆ. ಪೋಲಿಸರು ಈಗ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶವವನ್ನ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಿದರು.
ಈಗಿರುವ ಡಾರ್ಮೆಂಟರಿಯಲ್ಲಿ ಬಡವರಿಗೆ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ತಂಗಲು ಅವಕಾಶ ಮಾಡಿಕೊಡಲಾಗಿದೆ. ಕಾರ್ಡ್ ಇಲ್ಲದರಿಗೆ 30 ರೂ ಚಾರ್ಚ್ ಮಾಡಲಾಗುತ್ತಿದೆ. ಈಗಾಗಲೇ ರೋಗಿಗಳ ಸಂಬಂಧಿಕರು ಉಳಿದುಕೊಳ್ಳುವ ತಂಗುದಾಣ ವ್ಯವಸ್ಥೆ ಮಾಡಲಾಗಿದೆ. ಆದರೂ ಹೆಚ್ಚಿನ ಜನ ಹೊರಗಡೆಯಲ್ಲೇ ಮಲಗುತ್ತಾರೆ. ಈ ವೇಳೆ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ಗೊತ್ತಿಲ್ಲ ಪೋಸ್ಟ್ ಮಾರ್ಟಮ್ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಸುಧಾ ತಿಳಿಸಿದರು.
Key words: Mysore, man, sleeping, hospital, Death