ಮೈಸೂರು,ಜನವರಿ,16,2025 (www.justkannada.in): ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಬೇಸತ್ತು ಮನೆ ತೊರೆದಿರುವ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ವರದಿ ಆಗುತ್ತಿವೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ, ಗೃಹ ಇಲಾಖೆ ವೈಫಲ್ಯವೇ ಕಾರಣ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ಕೌಟಿಲ್ಯ, ಗ್ರಾಮೀಣ ಭಾಗದ ಜನರ ಬದುಕಿನ ಜೊತೆ ಮೈಕ್ರೋ ಫೈನಾನ್ಸ್ ಗಳು ಚೆಲ್ಲಾಟವಾಡುತ್ತಿವೆ. ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಜನ ಊರುಗಳನ್ನ ತೊರೆಯುತ್ತಿದ್ದಾರೆ. ಮೀಟರ್ ಬಡ್ಡಿಗಿನ್ನ ಅಧಿಕ ಬಡ್ಡಿಯನ್ನ ಮೈಕ್ರೋ ಫೈನಾನ್ಸ್ ಗಳು ಪಡೆಯುತ್ತಿವೆ. ರಾಜ್ಯ ಸರ್ಕಾರ ಹಾಗೂ ಪೊಲೀಸರು ಕೂಡ ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕುತ್ತಿಲ್ಲ. ಆರ್ ಬಿಐ ನ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಇದನ್ನ ವಿಶೇಷ ಪ್ರಕರಣವಾಗಿ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಗೃಹ ಇಲಾಖೆ ಪರಿಗಣಿಸಬೇಕು. ಮೈಕ್ರೋ ಫೈನಾನ್ಸ್ ಗಳ ಕಿರುಕುಳದಿಂದ ಜನರನ್ನ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳುತ್ತಿರುವವರು, ಸಂಕಷ್ಟದಲ್ಲಿರುವ ಬಡವರು. ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸಣ್ಣ ಹಿಡುವಳಿದಾರ ರೈತ ಕುಟುಂಬಗಳನ್ನಷ್ಟೇ ಕೇಂದ್ರೀಕರಿಸಿ ಕಿರು ಸಾಲ ನೀಡುವ ಈ ಸಂಸ್ಥೆಗಳು ಕೆಲವೊಮ್ಮೆ ಆರ್ ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವಿಪರೀತ ಬಡ್ಡಿ, ಕಂತುಗಳನ್ನು ಸಕಾಲದಲ್ಲಿ ಕಟ್ಟಲಾಗದಿದ್ದರೆ ಅದಕ್ಕೆ ಇತರ ದಂಡರೂಪದ ಶುಲ್ಕಗಳನ್ನು ವಿಧಿಸಿ ಜನರನ್ನು ಸಾಲದ ಕೂಪದಲ್ಲಿ ನರಳಿಸುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲಗಳಿಗೆ ವಾರ್ಷಿಕ ಶೇ. 21.50% ರಿಂದ 25% ಬಡ್ಡಿ ವಿಧಿಸಲಾಗುತ್ತಿದ್ದು, ಪ್ರೊಸೆಸಿಂಗ್ ಫೀ 1% ಹಾಗೂ ಇನ್ನೂರೆನ್ಸ್ ಫೀ 1% ವಿಧಿಸಲಾಗುತ್ತಿದೆ. ಆರ್‌ಬಿಐ ಹಾಗೂ ಮಾನವ ಹಕ್ಕುಗಳ ನಿಯಮಗಳನ್ನು ಉಲ್ಲಂಘಿಸಿ ಸಾಲಗಾರರನ್ನು ಬೆದರಿಸಿ ಅವರು ಆತ್ಮಹತ್ಯೆಗೆ ಶರಣಾಗುವಂತೆ ಅಥವಾ ಮನೆ ಬಿಟ್ಟು ಹೋಗುವಂತೆ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕುಟುಂಬಗಳ ಮನೆ ಜಪ್ತಿ ಕಾರ್ಯಗಳೂ ಸಹ ಆರಂಭವಾಗಿದೆ. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಸಾಲದ ಕೂಪಕ್ಕೆ ತಳ್ಳಲ್ಪಡುತ್ತಿರುವ ಜನರ ಬದುಕನ್ನು ಹೀರುವ ಮಾಫಿಯಾಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದು, ಸಾಲ ಕಟ್ಟಲು ವಿಫಲರಾದ ಸ್ಥಿತಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ ಎಂದು ರಘು ಕೌಟಿಲ್ಯ ಬೇಸರ ವ್ಯಕ್ತಪಡಿಸಿದರು.
ಪೋಲಿಸ್ ಅಥವಾ ನ್ಯಾಯಾಲಯದ ಮೂಲಕ ರಕ್ಷಣೆ ಪಡೆಯುವ ಜಾಗೃತಿ ಹಾಗೂ ಶಕ್ತಿಯಿಲ್ಲದ ಈ ಜನರು ಮಾನಕ್ಕಾಗಿ ಹೆದರಿ ಊರು ಬಿಡುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆಯವರ ಕಿರುಕುಳವನ್ನೂ ಮೀರಿಸಿದ ಯಾತನೆ ಅನುಭವಿಸುತ್ತಿರುವ ಮುಗ್ಧ ಜನರ ನೆರವಿಗೆ ಸರ್ಕಾರ ಮಧ್ಯ ಪ್ರವೇಶಿಸಬೇಕಿದೆ. ಮುಗ್ಧ ಜನರ ರಕ್ಷಣೆಗೆ ನಿಲ್ಲಬೇಕಿದೆ.
ರಾಜ್ಯದ ಗೃಹ ಇಲಾಖೆ. ಹಣಕಾಸು ಇಲಾಖೆ ಹಾಗೂ ಕಾನೂನು ಇಲಾಖೆ ಜಂಟಿಯಾಗಿ ಒಂದು ಸಮಿತಿಯನ್ನು ರಚಿಸಿ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಮೂಗುದಾರ ಹಾಕುವ ಕೆಲಸ ಜರೂರಾಗಿ ಕೈಗೊಳ್ಳಬೇಕಿದೆ. ಆ ಮೂಲಕ ಅಮಾಯಕ ಕುಟುಂಬಗಳಿಗೆ ನೆಮ್ಮದಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ಅಧಿಕಾರಿಗಳೊಂದಿಗೆ ಸರ್ಕಾರ ತುರ್ತು ಸಭೆ ನಡೆಸಿ ಕಾನೂನಾತ್ಮಕ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ರಘು ಕೌಟಿಲ್ಯ ಹೇಳಿದರು.
ಇಷ್ಟೆಲ್ಲ ಪ್ರಕರಣಗಳು ವರದಿಯಾಗುತ್ತಿದ್ದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತನಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿರುವುದು ಸರ್ಕಾರ ಮೈಕ್ರೋ ಫೈನಾನ್ಸ್‌ಗಳ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿರುವ ಬಗ್ಗೆ ಅನುಮಾನ ಮೂಡಿಸುತ್ತಿದೆ ಎಂದು ರಘು ಕೌಟಿಲ್ಯ ಕಿಡಿಕಾರಿದರು.
Key words: Microfinance, harassment, failure, Home Department, R. Raghu