ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಿಗೆ FREE  ಕರೆಂಟ್..!

ಬೆಂಗಳೂರು,ಜನವರಿ,16,2025 (www.justkannada.in): ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಉಪನಿರ್ದೇಶಕರು(ಯೋಜನೆ), ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲು, ಉಲ್ಲೇಖ(1 ಮತ್ತು 3)ರಲ್ಲಿ ಆದೇಶ ಹೊರಡಿಸಲಾಗಿದೆ. ಯೋಜನೆಯ ಅನುಷ್ಠಾನವು ಈಗಾಗಲೇ ಪ್ರಾರಂಭವಾಗಿದೆ. ಸದರಿ ಯೋಜನೆಯನ್ನು ಇನ್ನೂ ನಿಖರವಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಿಂದ(EDCS) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ತಂತ್ರಾಂಶವನ್ನು ಬಳಸಿಕೊಂಡು ಮುಖ್ಯೋಪಾಧ್ಯಾಯರುಗಳು ತಮ್ಮ ಶಾಲೆಯ ವಿದ್ಯುತ್ ಸಂಪರ್ಕದ ವಿವರವನ್ನು ಆನ್-ಲೈನ್‌ನಲ್ಲಿ ದಾಖಲಿಸಬೇಕಾಗಿದೆ.

ಈ ಕುರಿತು ಈಗಾಗಲೇ ಉಲ್ಲೇಖ(5)ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಮುಂದುವರೆದು ಈ ಮೊದಲು ಆನ್-ಲೈನ್ ಪೋರ್ಟಲ್‌ ನಲ್ಲಿ 01 ಯು-ಡೈಸ್ ಸಂಖ್ಯೆಗೆ 01 ವಿದ್ಯುತ್ ಸ್ಥಾವರದ ಅಕೌಂಟ್ ಐಡಿಯನ್ನು ನೊಂದಣಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಒಂದೇ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚಿನ ವಿದ್ಯುತ್ ಸ್ಥಾವರಗಳಿರುವುದರಿಂದ ಹಾಗೂ ಒಂದೇ ಆವರಣದಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯಿರುವ ಶಾಲೆಗಳು ಒಂದೇ ಯು-ಡೈಸ್ ಹೊಂದಿರುವುದರಿಂದ ಆನ್-ಲೈನ್ ಪೋರ್ಟ್‌ಲ್‌ನಲ್ಲಿ ನೊಂದಣಿ ಮಾಡಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಪ್ರಸ್ತುತ 01 ಯು-ಡೈಸ್ ಸಂಖ್ಯೆಗೆ ಗರಿಷ್ಠ 03 ವಿದ್ಯುತ್ ಸ್ಥಾವರಗಳ ಅಕೌಂಟ್ ಐಡಿಗಳನ್ನು ನೊಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಂಬಂಧಪಟ್ಟ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರುಗಳು ಆನ್-ಲೈನ್ ಪೋರ್ಟ್‌ಲ್‌ ನಲ್ಲಿ ಉಲ್ಲೇಖ(5)ರಲ್ಲಿ ತಿಳಿಸಿರುವ ಅಂಶಗಳಂತೆ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ(ಆಡಳಿತ)  ಸೂಚಿಸಿದ್ದಾರೆ.

ಹಾಗೆಯೇ ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳು ತಮ್ಮ ಶಾಲೆಯ ವಿದ್ಯುತ್ ಸಂಪರ್ಕದ ವಿವರಗಳನ್ನು ದಿನಾಂಕ: 27/01/2025ರೊಳಗೆ ತಪ್ಪದೇ ಭರ್ತಿ ಮಾಡುವಂತೆ ಕ್ರಮವಹಿಸುವಂತೆ ತಿಳಿಸಿದ್ದಾರೆ.

Key words: FREE electricity, all , government schools