ಮೈಸೂರು,ಜನವರಿ,16,2025 (www.justkannada.in): ಜನವರಿ 18 ರಂದು ಮೈಸೂರು ವಿಶ್ವವಿದ್ಯಾನಿಲಯದ 105ನೇ ಘಟಿಕೋತ್ಸವ ನಡೆಯಲಿದ್ದು ಅಂದು ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಡಾ.ಲೋಕನಾಥ್ ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕುಲಪತಿ ಡಾ.ಲೋಕನಾಥ್, ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನ ಸಿಂಡಿಕೇಟ್ ಹಾಲ್ ನಲ್ಲಿ ಘಟಿಕೋತ್ಸವ ನಡೆಯಲಿದೆ. ಈ ಬಾರಿ ಮಾಜಿ ಸಂಸದ ಡಾ.ಎ.ಸಿ ಷಣ್ಮುಗಂ, ಸಾರಿಗೆ ಮತ್ತು ಸಂಚಾರ ಇಂಜಿನಿಯರ್ ಉಪಾಧ್ಯಕ್ಷ ಡಾ.ಬಾಬು ಕೆ ವಿರೇಗೌಡ, ಗ್ಲೋಬಲ್ ಸಿಇಒ ಮತ್ತು ಮ್ಯಾನೇಜರ್ ಶಾಹೀನ್ ಮಜೀದ್ ರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಕಳೆದ ಬಾರಿ ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು. ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿರಲಿಲ್ಲ. ಈ ಬಾರಿಯ ಘಟಿಕೋತ್ಸವದಲ್ಲಿ ಸುಧಾಮೂರ್ತಿ ಅವರು ಗೌರವ ಡಾಕ್ಟರೇಟ್ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ವಾರ್ಷಿಕ ಘಟಿಕೋತ್ಸವದಲ್ಲಿ 31,689 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನ ಪಡೆದುಕೊಳ್ಳಲಿದ್ದಾರೆ. 140 ಪುರುಷರು, 164 ಮಹಿಳಾ ವಿದ್ಯಾರ್ಥಿಗಳಿಗೆ ಪಿಹೆಚ್ ಡಿ ಪ್ರದಾನ ಮಾಡಲಾಗುತ್ತದೆ. 6300 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತದೆ. 413ಚಿನ್ನದ ಪದಕಗಳು, 208 ನಗದು ಬಹುಮಾನವನ್ನ 216 ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. 25,085 ವಿದ್ಯಾರ್ಥಿಗಳು ಸ್ನಾತಕ ಪದವಿಯನ್ನ ಪಡೆಯುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ವಿದ್ಯಾರ್ಥಿಗಳ ಸಾಧನೆ, ಅತಿ ಹೆಚ್ಚು ನಗದು ಮತ್ತು ಚಿನ್ನದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಪೈಕಿ ಮಹಿಳಾ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ ಎಂದು ಕುಲಪತಿ ಡಾ.ಲೋಕನಾಥ್ ಮಾಹಿತಿ ನೀಡಿದರು.
Key words: Mysore University, 105th convocation, January 18