ಮಂಡ್ಯ,ಜನವರಿ,16,2025 (www.justkannada.in): ಮಹಿಳೆಯರು ತಮ್ಮ ವಿರುದ್ಧ ಅನ್ಯಾಯ ನಡೆದ ಸಂದರ್ಭದಲ್ಲಿ ಯಾವ ಭಯವು ಇಲ್ಲದೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವ ಧೈರ್ಯ ಬೆಳಸಿಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ತಿಳಿಸಿದರು.
ಇಂದು ಕೆ.ಆರ್.ಪೇಟೆ ತಾಲ್ಲೂಕು ಗುರುಭವನದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಕರ್ನಾಟಕ ಪೊಲೀಸ್ ಜನಸ್ನೇಹಿ ಪೊಲೀಸ್ ಎಂದೇ ಹೆಸರುವಾಸಿಯಾಗಿದ್ದು, ಮಹಿಳೆಯರು ತಮ್ಮ ಬಳಿ ಸದಾ ಸ್ಥಳೀಯ ಪೊಲೀಸ್ ಠಾಣೆ ಅಥವಾ ಪೊಲೀಸ್ ಅಧಿಕಾರಿಗಳ ಸಂಖ್ಯೆಯನ್ನು ಇಟ್ಟಿಕೊಳ್ಳಬೇಕು. ಕಷ್ಟದಲ್ಲಿ ಅಥವಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಂದರ್ಭದಲ್ಲಿ ಸರಿಯಾದ ಸ್ಪಂದನೆ ಸಿಗದಿದ್ದರೆ ನಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ಎಂದು ಕಿವಿ ಮಾತು ಹೇಳಿದರು.
ಮಹಿಳೆಯರು ಸ್ವಾವಲಂಬಿಗಳಾಗಬೇಕು. ಮನೆಯಿಂದ ಹೊರ ಹೋಗುವ ಮುನ್ನ ಅವರ ಪಸ್೯ ನಲ್ಲಿ ಹಣವಿರಬೇಕು. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಅತ್ಯವಶ್ಯಕವಾಗಿದ್ದು, ಮಹಿಳೆಯರು ಸ್ವಾವಲಂಬಿಗಳಾಗಲು ಹಲವಾರು ತರಬೇತಿ ಹಾಗೂ ಯೋಜನೆಗಳನ್ನು ರೂಪಿಸಲಾಗಿದೆ ಅದನ್ನ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಬಾಲ್ಯವಿವಾಹದಂತಹ ಅನಿಷ್ಠವನ್ನು ತೊಡೆದು ಹಾಕಲು ಮಹಿಳೆಯರಿಂದಲೇ ಸಾಧ್ಯ. ತಾಯಿ ತನ್ನ ಮಗಳಿಗೆ ವಿದ್ಯಾಭ್ಯಾಸ ನೀಡುತ್ತೇನೆ, ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಪಣ ತೊಡಬೇಕು ಎಂದರು.
ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಸಾಧನೆ ಮಾಡಲು ಕನಸು ಕಾಣಬೇಕು ಹಾಗೂ ಗುರಿ ನಿಗದಿ ಮಾಡಿಕೊಳ್ಳಬೇಕು. ಗುರಿ ಸಾಧನೆಗೆ ಜೀವನದಲ್ಲಿ ಹಲವಾರು ತೊಡಕುಗಳು ಬರುತ್ತವೆ ಅವುಗಳನ್ನು ಮೆಟ್ಟಿ ನಿಲ್ಲಬೇಕು. ನಿರಂತರ ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.
ಕೆ.ಆರ್.ಪೇಟೆ ಬಸ್ ನಿಲ್ದಾಣಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ದಿಢೀರ್ ಬೇಟಿ
ಇಂದು ಕೆ.ಆರ್. ಪೇಟೆ ನಗರ ಬಸ್ ನಿಲ್ದಾಣಕ್ಕೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ದಿಢೀರ್ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಮಾತನಾಡಿಸಿ ಬಸ್ ವ್ಯವಸ್ಥೆಯ ಬಗ್ಗೆ ವಿಚಾರಿಸಿದರು.
ಹಲವು ವಿದ್ಯಾರ್ಥಿನಿಯರು ತಮ್ಮ ಊರಿಗೆ ಸರಿಯಾಗಿ ಬಸ್ ಸಂಪರ್ಕ ಇಲ್ಲದಿರುವ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ನಮ್ಮ ಊರಿಗೆ ಸರಿಯಾಗಿ ಬಸ್ ಸಂಪರ್ಕ ಕಲ್ಪಿಸಿಕೊಡಿ ಎಂದು ಕೇಳಿಕೊಂಡರು. ಅನೇಕ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇದ್ದರೂ ಕೆಲವು ಕಡೆ ಬಸ್ ಚಾಲಕರು ವಾಹನ ನಿಲ್ಲಿಸುತ್ತಿಲ್ಲ ಎಂದರು. ತಕ್ಷಣ ಮಂಡ್ಯ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸೂಚಿಸಿದರು.
ಬಸ್ ನಿಲ್ದಾಣದಲ್ಲಿ ತಾಯಿ ಮಗುವಿನ ಕೊಠಡಿ ಇಲ್ಲದಿರುವುದನ್ನು ಕಂಡು ಪ್ರತಿ ಬಸ್ ನಿಲ್ದಾಣದಲ್ಲಿ ತಾಯಿ ಮಗುವಿನ ಕೊಠಡಿ ಇರಬೇಕು. ತಾಯಿ ಮಗುವಿನ ಕೊಠಡಿ ಏಕೆ ನಿರ್ಮಿಸಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಮಹಿಳಾ ವಿಶ್ರಾಂತಿ ಕೊಠಡಿಗೆ ಭೇಟಿ ನೀಡಿ ಕೊಠಡಿಯ ಶುಚಿತ್ವ ಗಮನಿಸಿ, ಸ್ವಚ್ಚತಾ ಸಿಬ್ಬಂದಿಗೆ ಸೂಕ್ತ ಸ್ವಚ್ಚತಾ ಕ್ರಮ ಕೈಗೊಂಡು ಕಾರ್ಯ ನಿರ್ವಾಹಿಸಿ ಮತ್ತು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದ ಹೇಳಿದರು.
ನಂತರ ಶೌಚಾಲಯಕ್ಕೆ ಭೇಟಿ ನೀಡಿದರು. ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಮತ್ತು ಶೌಚಾಲಯದಲ್ಲಿ ಸರಿಯಾಗಿ ಸ್ವಚ್ಛತೆ ಕಾಪಾಡುವುದಿಲ್ಲ. ಎಂದು ಸಾರ್ವಜನಿಕರು ದೂರಿದರು, ಸಂಬಂಧಪಟ್ಟ ಸ್ವಚ್ಚತಾ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಮಹಿಳೆಯರಿಂದ ಹಣ ವಸೂಲಿ ಮಾಡಬಾರದು ಹಾಗೂ ಶೌಚಾಲಯಕ್ಕೆ ಸೂಕ್ತ ಬಾಗಿಲುಗಳ ವ್ಯವಸ್ಥೆ ಮತ್ತು ಸ್ವಚ್ಚತೆಯನ್ನು ಸರಿಯಾಗಿ ನಿರ್ವಹಣೆ ಮಾಡಿ ಎಂದು ಸೂಚಿಸಿದರು.
Key words: courage, police station, complaint, Dr. Nagalakshmi Chowdhury