ನೀವು ನಿಜವಾಗಿಯೂ ಸಂವಿಧಾನ ಪಾಲಕರಾಗಿದ್ರೆ ಮೋಹನ್ ಭಾಗವತ್ ಮೇಲೆ ಕ್ರಮ ಜರುಗಿಸಿ- ವಿ.ಎಸ್ ಉಗ್ರಪ್ಪ ಸವಾಲು

ಮೈಸೂರು,ಜನವರಿ,17,2025 (www.justkannada.in): ಶ್ರೀರಾಮಮಂದಿರ ನಿರ್ಮಾಣ ಬಳಿಕ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿಕೆ ನೀಡಿದ್ದ ಮೋಹನ್ ಭಾಗವತ್  ಅವರ ಮೇಲೆ ಕ್ರಮ ಜರುಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ  ಕೆಪಿಸಿಸಿ ಉಪಾಧ್ಯಕ್ಷ ವಿ‌.ಎಸ್ ಉಗ್ರಪ್ಪ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಇಂದು ಕೆಪಿಸಿಸಿ ಉಪಾಧ್ಯಕ್ಷ  ವಿ‌.ಎಸ್ ಉಗ್ರಪ್ಪ ಮತ್ತು ಜಿಎನ್ ನಂಜುಂಡಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ವಿ.ಎಸ್ ಉಗ್ರಪ್ಪ, ರಾಹುಲ್ ಗಾಂಧಿ ಹೇಳಿಕೆ ಕೊಟ್ಟಾಗ ಅದಕ್ಕೆ ಅಪಾರ್ಥ ಕಲ್ಪಿಸಿ ಅವರ ಮೇಲೆ ದೂರು ಕೊಟ್ಟು ಕೇಸ್ ಹಾಕುವ ಕೆಲಸ ಬಿಜೆಪಿಯಿಂದ ನಡೆಯುತ್ತದೆ. ಆದರೆ ನಿಮ್ಮ ಮೂಲಕ ಕೇಳುತ್ತೇನೆ ಮಿಸ್ಟರ್ ಮೋದಿ, ಮಿಸ್ಟರ್ ಅಮಿತ್ ಶಾ ನೀವು ಸಂವಿಧಾನದ ಅಡಿ ಪ್ರಧಾನಿ ಆಗಿರೋದು ಸಚಿವರಾಗಿರೋದು. ಮೋಹನ್ ಭಾಗವತ್ ಹೇಳಿಕೆಯಿಂದ ಸಂವಿಧಾನ ಮೇಲೆ ನಿಮಗೆ ಎಷ್ಟು ಗೌರವವಿದೆ ಎಂದು ಗೊತ್ತಾಗುತ್ತದೆ. ನೀವು ನಿಜವಾಗಿಯೂ ಸಂವಿದಾನ ಪಾಲಕರಾಗಿದ್ದರೆ ಮೋಹನ್ ಭಾಗವತ್ ಮೇಲೆ ಕ್ರಮ ಜರುಗಿಸಿ. ಸ್ವಾತಂತ್ರ್ಯ ಚಳುವಳಿಯಲ್ಲಿ ಆರ್ ಎಸ್ಎಸ್ ಪಾತ್ರ ಏನು.? ತ್ಯಾಗ ಬಲಿದಾನದ ಮೂಲಕ ಬಂದಿರುವ ಸ್ವಾತಂತ್ರ್ಯವನ್ನ ಅಣಕು ಮಾಡಿತ್ತೀರಲ್ಲ ನಿಮಗೆ ಬುದ್ದಿ ಭ್ರಮಣೆ ಆಗಿದೆಯಾ.? ಆರ್ ಎಸ್ಎಸ್ ನವರು ಸಂವಿಧಾನ, ಸ್ವಾತಂತ್ರ್ಯವನ್ನ ವಿರೋಧಿಸುತ್ತೀರಲ್ಲ. ಕೇಂದ್ರ ಸರ್ಕಾರ ಸುಮೊಟೊ ಕೇಸನ್ನ ಮೋಹನ್ ಭಾಗವತ್ ಮೇಲೆ ಹಾಕಬೇಕು. ಇಲ್ಲ ಅಂದ್ರೆ ನೀವು ದೇಶವನ್ನ ಈಸ್ಟ್ ಇಂಡಿಯಾ ಕಂಪನಿಯಂತೆ ಈ ದೇಶದ ಸ್ವತ್ತನ್ನ ಅಂಬಾನಿ ಅದಾನಿಯವರಿಗೆ ವಹಿಸಲು ಹೊರಟಿದ್ದೀರಿ. ಈ ದೇಶದ ಇತಿಹಾಸ, ಸ್ವಾತಂತ್ರ್ಯ ಚಳುವಳಿಯಲ್ಲಿ ಇತಿಹಾಸವನ್ನ ತಿರುಚುವ ಕೆಲಸವನ್ನ ಆರ್ ಎಸ್ಎಸ್, ಬಿಜೆಪಿ ಮಾಡುತ್ತಿದೆ. ಇದನ್ನ ಜನರಿಗೆ ತಿಳಿಸುವ ಕೆಲಸವನ್ನ ನಾವು ಮಾಡುತ್ತೇವೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿವರು ಕಾಂಗ್ರೆಸ್ ನವರು, ಈ ದೇಶದ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ನವರು ನಿಮ್ಮದಲ್ಲ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಮೇಲೆ ಉಗ್ರಪ್ಪ ವಾಗ್ದಾಳಿ.

ಇದೇ ಜನವರಿ 21 ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ನಡೆಯಲಿದೆ. ಸುವರ್ಣಸೌಧದ ಮುಂಭಾಗ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣವಾಗಲಿದೆ. ಕಳೆದ ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಸಮಾವೇಶ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಮುಂದೂಡಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ನ ಅಧ್ಯಕ್ಷತೆ  ವಹಿಸಿ ಅಧಿವೇಶನ ನಡೆಸಿದ್ದರು.  ಅದರ ಶತಮಾನೋತ್ಸವದ ಸಂಧರ್ಭದಲ್ಲಿ ಈ ಒಂದು ಕಾರ್ಯಕ್ರಮ ನಡೆಯುತ್ತಿದೆ. ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಎಂಬ ಸ್ಲೋಗನ್ ಮೂಲಕ ದೇಶದಲ್ಲಿ ಸಮಾನತೆ, ಸಾಮರಸ್ಯ ಸಾರುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಜರುಗಲಿದೆ. ಮಹಾತ್ಮ ಗಾಂಧಿ ಅವರ ವಿಚಾರ ಧಾರೆ, ಮತ್ತೊಂದು ಕಡೆ ಮಹಾತ್ಮ ಗಾಂಧಿ ಹತ್ಯೆ ಮಾಡಿದ ನಾತುರಾಂ ಗೂಡ್ಸೆ ವಿಚಾರಧಾರೆ ಚರ್ಚೆಗೆ ಬರಲಿದೆ ಎಂದರು.

ಯಾರು ನಾತುರಾಂ ಗೂಡ್ಸೆ ಪರಿಪಾಲಕರಿದ್ದಾರೋ, ಆರ್ ಎಸ್ಎಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಅವರು  ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947 ರಲ್ಲಿ ಅಲ್ಲ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಬಳಿಕ ಬಂದಿದೆ ಎನ್ನುತ್ತಾರೆ. ಇವರ ಮನಸ್ಥಿತಿ ಹೇಗಿದೆ ನೋಡಿ. ಈ ದೇಶದ ಸಂವಿಧಾನವನ್ನ ಗೌರವಿಸಬೇಕು. ದೇಶದ ಇತಿಹಾಸ ಪರಂಪರೆಯನ್ನ ಗೌರವಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ಹಲವು ಜೀವಗಳ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ಅದನ್ನ ಅಲ್ಲೆಗಳೆಯುವಂತಹ ಕೆಲಸವನ್ನ ಆರ ಎಸ್ಎಸ್ ಮಾಡುತ್ತಿದೆ. ಇದನ್ನ‌ ಏನಂತ ಕರೆಯಬೇಕು ಎಂದು ಗುಡುಗಿದರು.

ಇಂದು ಒಂದು ಡಾಲರ್ ಮೌಲ್ಯದ ಮುಂದೆ ರೂಪಾಯಿ ಮೌಲ್ಯ 86 ರೂಗೆ ಏರಿದೆ. ಕಳೆದ 10 ವರ್ಷದಿಂದ ಸುಮಾರು 132 ಲಕ್ಷ ಕೋಟಿ ಸಾಲ ಮಾಡಿದ್ದಾರೆ. 1947 ರಿಂದ 2014 ರ ವರೆಗೂ ಮಾಡದ ಸಾಲವನ್ನ ಕೇವಲ ಹತ್ತು ವರ್ಷಗಳಲ್ಲಿ ಮಾಡಿದೆ. ಈ ಒಂದು ಸಮಾವೇಶ ಮೂಲಕ ದೇಶದಲ್ಲಿ ಸಂವಿಧಾನವನ್ನ ಉಳಿಸಲು, ಗಾಂಧಿಜೀಯವರ ವಿಚಾರಧಾರೆಗಳನ್ನ ಉಳಿಸಲಿಕ್ಕೆ ಈ ಸಮಾವೇಶ ನಡೆಯುತ್ತಿದೆ. ಇದಕ್ಕೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ.

ಬಿಎಸ್  ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಇಲ್ಲ. ವಿತೌಟ್ ಯಡಿಯೂರಪ್ಪ ನಾಟ್ ಅಟ್ ಆಲ್ ವಿಜಯೇಂದ್ರ. ಬಿಜೆಪಿಯೇ  ಒಂದು ಮನೆ ಮೂರು ಬಾಗಿಲು ಎಂಬಂತಾಗಿದೆ. ಅದನ್ನ ಬಿಟ್ಟು ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ  ನಿಮಗೆ ಇಲ್ಲ. ನಮ್ಮ ಪಕ್ಷದ 138 ಸ್ಥಾನಗಳೊಂದಿಗೆ ಸರ್ಕಾರ ಸುಭದ್ರವಾಗಿದೆ.  5 ವರ್ಷಗಳ ಕಾಲ ಭದ್ರವಾಗಿರುತ್ತದೆ. ಬೇರೆ ಯಾರೋ ಹೇಳಿದರು ಅಂತ ನಮ್ಮ ಸರ್ಕಾರ ಬಿದ್ದು ಹೋಗುವುದಿಲ್ಲ. ಯಾರು ಮುಖ್ಯಮಂತ್ರಿ ಇರ್ತಾರೋ ಬಿಡ್ತಾರೋ ಗೊತ್ತಿಲ್ಲ ಆದರೆ ಕಾಂಗ್ರೆಸ್ ಸರ್ಕಾರ ಇದ್ದೇ ಇರುತ್ತೆ. ಯಾರು ಸಿಎಂ ಆಗಬೇಕು ಆಗಬಾರದು ಅಂತ ನಾನು ಬೆಂಕಿ ಹಚ್ಚುವ ಕೆಲಸ ಮಾಡಲ್ಲ ಎಂದರು.

ರಾಷ್ಟ್ರ ಮಟ್ಟದಲ್ಲಿ ಜಾತಿಗಣತಿಯನ್ನ ಕೇಂದ್ರ ಸರ್ಕಾರ ಮಾಡಬೇಕು. ಜನ ಗಣತಿಯೊಂದಿಗೆ ಜಾತಿಗಣತಿಯನ್ನ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಮಹಿಳಾ ಮೀಸಲಾತಿಯನ್ನ ಜಾರಿಗೆ ತರಬೇಕು ಎಂದು  ವಿಎಸ್ ಉಗ್ರಪ್ಪ ಆಗ್ರಹಿಸಿದರು.

ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ಆರ್. ಮೂರ್ತಿ, ಕಾಂಗ್ರೆಸ್ ಮುಖಂಡರಾದ ಶಿವಣ್ಣ, ಈಶ್ವರ್ ಚಕ್ಕಡಿ, ದ್ಯಾವಪ್ಪನಾಯಕ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: Constitution, action , against, Mohan Bhagwat, VS Ugrappa, Mysore