ಏರ್ ಶೋ-2025: ಯಲಹಂಕ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ತಗ್ಗಿಸಲು ಸೂಚನೆ

ಬೆಂಗಳೂರು, ಜನವರಿ,17,2025 (www.justkannada.in): ಏರ್‌ ಶೋ ಹಿನ್ನೆಲೆಯಲ್ಲಿ ಯಲಹಂಕ ವಾಯುಸೇನಾ ನೆಲೆಯ  ಸುತ್ತಮುತ್ತ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಕ್ರೇನ್ ಎತ್ತರವನ್ನು ತಗ್ಗಿಸುವಂತೆ ಬಿಬಿಎಂಪಿ ಸೂಚನೆ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ನಗರ ಯೋಜನೆಯ ಉತ್ತರ ವಿಭಾಗದ ಜಂಟಿ ನಿರ್ದೇಶಕ ವಿ. ರಾಕೇಶ್ ಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯ ವಾಯುಸೇನಾ ನೆಲೆ(Air Force Station)ಯಲ್ಲಿ ದಿನಾಂಕ: 01.02.2025 ರಿಂದ 14.02.2025 ರವರೆಗೆ ಅಂತರಾಷ್ಟ್ರೀಯ ಮಟ್ಟದ ‘ಏರ್ ಇಂಡಿಯಾ-2025(AERO INDIA) ನಡೆಯಲಿದೆ.

ಏರ್ ಶೋ-2025 ನಡೆಯುತ್ತಿರುವ ಪ್ರಯುಕ್ತ ಯಲಹಂಕ ವಾಯುಸೇನಾ ನೆಲೆಯಿಂದ 10.00 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‌ ಗಳ ಎತ್ತರವನ್ನು ದಿನಾಂಕ: 01.02.2025 ರಿಂದ 14.02.2025 ರವರೆಗೆ ತಗ್ಗಿಸಲು ಹಾಗೂ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಬಹುಮಹಡಿ ಕಟ್ಟಡಗಳ ಸಂಸ್ಥೆಗಳು/ಅಭಿವೃದ್ಧಿದಾರರಿಗೆ ಈ ಮೂಲಕ ತಿಳಿಯಪಡಿಸಿದೆ.

ಮುಂದುವರಿದು, ವಾಯುಸೇನಾ ನೆಲೆಯಿಂದ 10.00 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲಾ ಬೃಹತ್ ಕಟ್ಟಡಗಳು, ಮೇಲಿನ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ ಕ್ರಾಪ್ಟ್ 1937ರ ರೂಲ್ 91 ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Key words: Air Show-2025, reduce, height, buildings, cranes,Yelahanka