ಮೈಸೂರು,ಜನವರಿ,20,2025 (www.justkannada.in): ಚೊಚ್ಚಲ ಖೋ ಖೋ ವಿಶ್ವಕಪ್ ನಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ತಂಡದಲ್ಲಿ ಭಾಗಿಯಾಗಿದ್ದ ಮೈಸೂರು ಜಿಲ್ಲೆಯ ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಪ್ರತಿಭೆ ಚೈತ್ರ ಮನೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ.
ಕುರುಬೂರು ಗ್ರಾಮ ಆಟಗಾರ್ತಿ ಚೈತ್ರ ಭಾರತದ ಸಾಧನೆಯಲ್ಲಿ ಮಹೋನ್ನತ ಸೇವೆ ಸಲ್ಲಿಸಿದ್ದು ಚೈತ್ರಾ ಮನೆಯಲ್ಲಿ ಪೋಷಕರು ಮಗಳ ಟ್ರೋಪಿಗಳನ್ನು ಒಂದೆಡೆ ಇಟ್ಟು, ಪ್ರದರ್ಶನ ಮಾಡಿ ಸಂಭ್ರಮಿಸಿದ್ದಾರೆ.
ಮಗಳ ಸಾಧನೆ ಕಂಡು ಗದ್ಗತಿರಾದ ಚೈತ್ರ ತಂದೆ ಬಸವಣ್ಣ, ತಾಯಿ ನಾಗರತ್ನ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಮಗಳಿಗೆ ಶಿಕ್ಷಕ ಮಂಜುನಾಥ್ ಎರಡನೇ ತಂದೆಯಂತೆ. ನಾವು ಜನ್ಮ ಕೊಟ್ಟ ತಂದೆ, ಅವರು ನಮ್ಮ ಹುಡುಗಿಗೆ ಒಳ್ಳೆಯ ದಾರಿ ತೋರಿಸಿದ್ದಾರೆ. ಮಗಳ ಸಾಧನೆ ನೋಡಿ ತುಂಬಾ ಖುಷಿ ಆಗುತ್ತಿದೆ. ನನ್ನ ಮಗಳು ಟೂರ್ನಿಗೆ ಹೋಗುವಾಗಲೇ ನಾನು ವಿಶ್ವಕಪ್ ಗೆದ್ದೇ ಬರುತ್ತೇನೆ ಎಂದಿದ್ದಳು. ಅದರಂತೆ ಗೆದ್ದು ಬಂದಿದ್ದಾಳೆ ಎಂದು ತಂದೆ ಬಸವರಾಜು ಹರ್ಷ ವ್ಯಕ್ತಪಡಿಸಿದ್ದಾರೆ.
ಹಳ್ಳಿಯ ಮಗಳು ಇಂತಹ ಸಾಧನೆ ಮಾಡಿರೋದು ನಮಗೆ ಹೆಮ್ಮೆ. ನನ್ನ ತಂದೆ ನನ್ನನ್ನ 9 ನೇ ತರಗತಿ ವರೆಗೆ ಓದಿಸಿದ್ದರು. ನನ್ನ ಮಗಳು ಓದುವಾಗ ಅವಳ ಇಷ್ಟದಂತೆ ನಾವು ಸಪೋರ್ಟ್ ಮಾಡಿದ್ದೇವೆ. ನನ್ನ ಮಗಳು ಓದುವುದು, ಆಟ ಎರಡರಲ್ಲೂ ಮುಂದು. ಹಳ್ಳಿಯಲ್ಲಿ ಜನ ಸಾಕಷ್ಟು ಮಾತನಾಡಿದರು. ಆದರೆ ಅದನ್ನ ನಾವು ತಲೆಗೆ ಹಾಕಿಕೊಳ್ಳಲಿಲ್ಲ. ಈಗ ಮಗಳ ಸಾಧನೆ ನೋಡಿದಾಗ ಜನರ ಮಾತನ್ನ ನಾನು ಆಶಿರ್ವಾದ ಅಂತ ತಿಳಿದುಕೊಂಡೆ. ಮುಂದೆ ನಮ್ಮ ಮಗಳು ಏನು ಸಾಧನೆ ಮಾಡಬೇಕು ಅಂದುಕೊಂಡಿದ್ದಾಳೆ ಅದಕ್ಕೆ ಮುಕ್ತ ಅವಕಾಶ ಕೊಡುತ್ತೇವೆ. ಮಗಳಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದ ತಾಯಿ ನಾಗರತ್ನ ಸಂತಸಪಟ್ಟಿದ್ದಾರೆ.
ಆಟಗಾರ್ತಿ ಚೈತ್ರಾ ಸಾಧನೆ ಕೊಂಡಾಡಿದ ತರಬೇತುದಾರ ಮಂಜುನಾಥ್
ಚೈತ್ರಾ 4 ನೇ ತರಗತಿಯಲ್ಲಿ ಇದ್ದಾಗಿನಿಂದ ಖೋಖೋ ಹೇಳಿಕೊಟ್ಟಿದ್ದ ಶಿಕ್ಷಕ ಹಾಗೂ ತರಬೇತುದಾರ ಮಂಜುನಾಥ್ ಇದೀಗ ಆಟಗಾರ್ತಿ ಚೈತ್ರಾ ಸಾಧನೆ ಕೊಂಡಾಡಿದ್ದಾರೆ. ಚೈತ್ರಾ ಸಾಧನೆ ಇತರ ಮಕ್ಕಳಿಗೂ ಸ್ಪೂರ್ತಿ ಆಗಬೇಕು. ಆ ಮಗು ಕೂಡ ಇದೇ ಗ್ರಾಮದ ಖೋಖೋ ಆಟಗಾರ್ತಿ ವೀಣಾ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದರು. ಫೈನಲ್ ಪಂದ್ಯ ನೋಡಿ ಬಹಳ ಖುಷಿ ಆಗಿದೆ. ಕಣ್ಣು ತುಂಬಿ ಬಂತು. ಹೂವಿನಿಂದಿಗೆ ನಾರು ಸ್ವರ್ಗ ಸೇರಿತು ಎಂಬಂತೆ ನನ್ನ ಬದುಕು ಆಗಿದೆ. ಗಣಿತ ಶಿಕ್ಷಕನಾಗಿ ಬಂದವನು ಮಕ್ಕಳ ಸಾಮರ್ಥ್ಯ ನೋಡಿ ಖೋಖೋ ಕಲಿಸಿದೆ. ಇಂದು ಇದೇ ಶಾಲೆಯಲ್ಲಿ ಖಾಯಂ ಶಿಕ್ಷಕನೂ ಆದೆ. ಚೈತ್ರಾ ಯಾವಾಗಲೂ ಕುರುಬೂರು ಶಾಲಾ ಕ್ರೀಡಾಂಗಣದಲ್ಲೇ ಪ್ರಾಕ್ಟೀಸ್ ಮಾಡುತ್ತಿದ್ದಳು. ವಿಶ್ವಕಪ್ ಆಯ್ಕೆ ನಂತರ ದಿನಕ್ಕೆ ಮೂರು ಬಾರಿ ಅಭ್ಯಾಸ ಮಾಡುತ್ತಿದ್ದಳು. ಪಂದ್ಯಕ್ಕಾಗಿ ಸಾಕಷ್ಟು ಅಭ್ಯಾಸ ಮಾಡಿದ್ದಳು. ಆ ಮಗುವಿಗೆ ಆಲ್ ದಿ ಬೆಸ್ಟ್ ಎಂದು ಹೇಳುವ ಮೂಲಕ ತರಬೇತುದಾರ ಮಂಜುನಾಥ್ ಚೈತ್ರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Key words: Mysore, Player, Kho Kho World Cup, India team,