ವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಕೇಸ್: ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕೋಲ್ಕತ್ತಾ,ಜನವರಿ,20,2025 (www.justkannada.in): ಕೋಲ್ಕತ್ತಾದ ಆರ್. ಜಿ ಕಾರ್ ಆಸ್ಪತ್ರೆಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ  ಸಿಲ್ದಾಹ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.

ಸಿಲ್ದಾಹ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆರ್ ಜಿ ಕರ್ ಪ್ರಕರಣವು ಪಶ್ಚಿಮ ಬಂಗಾಳವನ್ನು ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇಂದು ಈ ಪ್ರಕರಣದ ಅಪರಾಧಿಗೆ ಶಿಕ್ಷೆ ಪ್ರಕಟಿಸಲಾಗಿದೆ.

ಆಗಸ್ಟ್ 9, 2024 ರಂದು, 36 ಗಂಟೆಗಳ ಪಾಳಿಯ ನಂತರ ವಿಶ್ರಾಂತಿ ಪಡೆಯಲು ಆಸ್ಪತ್ರೆಯ ಸೆಮಿನಾರ್ ಹಾಲ್‌ ನಲ್ಲಿ ಮಲಗಿದ್ದ ಯುವ ತರಬೇತಿ ವೈದ್ಯೆ  ಮೇಲೆ ಅತ್ಯಾಚಾರ  ನಡೆದು ಹತ್ಯೆಯಾಗಿತ್ತು.  ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ನಡೆದಿದ್ದ ಈ ಘಟನೆಗೆ ದೇಶವ್ಯಾಪಿ ಅಕ್ರೋಶ ವ್ಯಕ್ತವಾಗಿತ್ತು. ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಪೊಲೀಸರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್‌ ರಾಯ್‌ ನನ್ನು ಆಗಸ್ಟ್‌ 10 ರಂದು ಬಂಧಿಸಿದ್ದರು.  ಜನವರಿ 18 ರಂದು ಸಂಜಯ್ ರಾಯ್ ಪ್ರಕರಣದಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿ ಶಿಕ್ಷೆ ಪ್ರಮಾಣ ಪ್ರಕಟಿಸುವುದನ್ನು ಇಂದಿಗೆ ಕಾಯ್ದಿರಿಸಿತ್ತು.

Key words: Doctor, rape, murder case, Convict, life imprisonment