ಬೆಂಗಳೂರು,ಜನವರಿ,22,2025 (www.justkannada.in): ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಹಾಗೂ ರಾಜ್ಯಾಧ್ಯಕ್ಷರ ಚುನಾವಣೆ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದ್ದು ಈ ಮಧ್ಯೆ ಬಿಜೆಪಿ ಪ್ರಬಲ ನಾಯಕ ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ಪಕ್ಷವನ್ನು ತೊರೆಯುವ ಬಗ್ಗೆ ಸಭೆಯಲ್ಲೇ ಬಹಿರಂಗವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ.
ಹೌದು, ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಂಸದ ಶ್ರೀರಾಮುಲು ಅವರು ಇತ್ತೀಚಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡು, ನಾನು ಪಕ್ಷ ಬಿಡುತ್ತೇನೆಂದು ಹೇಳಿದ್ದಾರೆಂದು ತಿಳಿದುಬಂದಿದೆ.
ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು, ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನಾಯಕರ ಶ್ರಮ ಸಾಕಾಗಿಲ್ಲ ಎಂದು ಶ್ರೀರಾಮುಲು ಅವರನ್ನು ಸೇರಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ಬೇಸರಗೊಂಡ ಶ್ರೀರಾಮುಲು ಅವರು ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.
ಪಕ್ಷದಲ್ಲಿ ಇನ್ನೂ ಕೆಲವರು ಉಪಚುನಾವಣೆ ಸೋಲಿನ ಕುರಿತಾದ ವರದಿಯನ್ನು ಕೊಟ್ಟೇ ಇಲ್ಲ. ಅದಕ್ಕೂ ಮುನ್ನವೇ ನೀವು ಹೇಗೆ ನನ್ನನ್ನು ಕೆಲಸ ಮಾಡಿಲ್ಲ ಎನ್ನುತ್ತಿದ್ದೀರಿ? ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಆದರೆ ನನ್ನ ಮೇಲೆ ಸುಮ್ಮನೆ ದೂರು ಕೊಟ್ಟಿದ್ದಾರೆ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆಯೇ ಇಲ್ಲ ಎಂದು ರಾಧಾಮೋಹನ್ ದಾಸ್ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನನ್ನನ್ನ ರಾಜಕೀಯವಾಗಿ ಮುಗಿಸಲು ಜನಾರ್ಧನ ರೆಡ್ಡಿ ಯತ್ನ: ಶ್ರೀರಾಮುಲು ಗಂಭೀರ ಆರೋಪ
ಈ ಕುರಿತು ಮಾಜಿ ಸಚಿವ ಶ್ರೀರಾಮುಲು ಅವರು ಹೈಕಮಾಂಡ್ ಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ ಎನ್ನಲಾಗಿದೆ. ಜನಾರ್ದನ ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ರಾಧಾಮೋಹನ್ ದಾಸ್ ಲಘುವಾಗಿ ಮಾತನಾಡಿದ್ದಾರೆ. ಪಕ್ಷದಲ್ಲಿ ತಾನು ಅಂದುಕೊಂಡಂತೆ ನಡೆಯಬೇಕೆಂದ ಮನಸ್ಥಿತಿ ಜನಾರ್ಧನ ರೆಡ್ಡಿ ಅವರಿಗಿದೆ. ನನ್ನನ್ನ ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ನಾನು ಕೆಲಸ ಮಾಡಿಲ್ಲ ಅಂತಾ ಜನಾರ್ದನ ರೆಡ್ಡಿ ಹೇಳಿದ್ದಾರೆ. ಅಲ್ಲದೆ ನಿನ್ನೆ ನಡೆದ ಸಭೆಯಲ್ಲಿ ನನಗೆ ಅಪಮಾನ ಮಾಡಲಾಗಿದೆ. ಈ ರೀತಿ ಘಟನೆ ನಡೆದರೇ ಪಕ್ಷದಲ್ಲಿ ಕೆಲಸ ಮಾಡೋದು ಕಷ್ಟ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಬಳಿ ಶ್ರೀರಾಮುಲು ಹೇಳಿದ್ದಾರೆ ಎನ್ನಲಾಗಿದೆ.
Key words: Dissatisfaction, Radha Mohandas, former MLA, Sriramulu