ಬೆಂಗಳೂರು,ಜನವರಿ,23,2025 (www.justkannada.in): ‘ಪೈಲ್ವಾನ್’ ಚಿತ್ರಕ್ಕಾಗಿ ತಮಗೆ ಘೋಷಣೆಯಾಗಿದ್ದ 2019ನೇ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಸ್ವೀಕರಿಸಲು ನಟ ಕಿಚ್ಚ ಸುದೀಪ್ ನಯವಾಗಿ ನಿರಾಕರಿಸಿದ್ದಾರೆ.
ಈ ಬಗ್ಗೆ ನಟ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದು, ಅರ್ಹ ಬೇರೊಬ್ಬ ನಟನಿಗೆ ಪ್ರಶಸ್ತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಾನು ಕಳೆದ ಹಲವಾರು ವರ್ಷಗಳಿಂದ ಯಾವುದೇ ಪ್ರಶಸ್ತಿಗಳನ್ನ ಸ್ವೀಕರಿಸದಂತೆ ನಿರ್ಧಾರ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತಿಲ್ಲ. ನನ್ನನ್ನು ಆಯ್ಕೆ ಮಾಡಿದ ತೀರ್ಪುಗಾರರ ಸಮಿತಿ ಮತ್ತು ಸರ್ಕಾರಕ್ಕೆ ಧನ್ಯವಾದವನ್ನ ಅರ್ಪಿಸುತ್ತೇನೆ. ಈ ಬಗ್ಗೆ ಯಾರು ಅನ್ಯತಾ ಭಾವಿಸಬಾರದು. ನನಗಿಂತ ಹೆಚ್ಚಾಗಿ ಕಲೆಗೆ ಶ್ರಮಿಸಿರುವ ಹಲವಾರು ಕಲಾವಿದರು ಇದ್ದಾರೆ. ಅವರಲ್ಲಿ ಯಾರನ್ನಾದರೂ ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ನೀಡಿದರೇ ನನಗೆ ಸಂತೋಷವಾಗುತ್ತದೆ ಎಂದು ತಿಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ನಟ ಸುದೀಪ್ ಹಂಚಿಕೊಂಡಿರುವ ಅಭಿಪ್ರಾಯ ಹೀಗಿದೆ ನೋಡಿ..
ಗೌರವಾನ್ವಿತ ಕರ್ನಾಟಕ ಸರ್ಕಾರ ಮತ್ತು ತೀರ್ಪುಗಾರರ ಸಮಿತಿಗೆ,
ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸುವುದು ನನ್ನ ಸೌಭಾಗ್ಯವೇ ಸರಿ. ಈ ಗೌರವ ನೀಡಿದ ತೀರ್ಪುಗಾರರಿಗೆ ನಾನು ಹೃದಯಸ್ಪರ್ಶಿ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಹಲವು ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳಿಂದ ನಾನು ಯಾವುದೇ ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ಈ ನಿರ್ಧಾರವನ್ನು ಮುಂದುವರಿಸಲು ನಾನು ಬದ್ಧನಾಗಿದ್ದೇನೆ. ಈ ಪ್ರಶಸ್ತಿಗೆ ನನಗಿಂತ ಬಹಳಷ್ಟು ಅರ್ಹ ವ್ಯಕ್ತಿಗಳಿದ್ದು, ಈ ಪ್ರತಿಷ್ಠಿತ ಮನ್ನಣೆಯನ್ನು ಅವರಲ್ಲಿ ಒಬ್ಬರು ಸ್ವೀಕರಿಸುವುದನ್ನು ನೋಡುವುದು ನನಗೆ ಹೆಚ್ಚು ಸಂತೋಷವನ್ನುಂಟು ಮಾಡುತ್ತದೆ.
ಯಾವುದೇ ಪ್ರಶಸ್ತಿಯ ನಿರೀಕ್ಷೆಗಳಿಲ್ಲದೆ ಜನರನ್ನು ರಂಜಿಸುವುದು ನನ್ನ ಉದ್ದೇಶವಾಗಿದೆ. ತೀರ್ಪುಗಾರರು ನನ್ನನ್ನು ಈ ಪ್ರಶಸ್ತಿಗೆ ಗುರುತಿಸಿರುವುದು ನನ್ನ ಕೆಲಸವನ್ನು ಮತ್ತಷ್ಟು ಉತ್ತಮವಾಗಿ ನಿರ್ವಹಿಸಲು ನನಗೆ ಪ್ರೇರಣೆಯಾಗಿದೆ. ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲ ತೀರ್ಪುಗಾರರಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ನಿರ್ಧಾರದ ಬಗ್ಗೆ ಯಾರೂ ಕೂಡ ಅನ್ಯತಾ ಭಾವಿಸಬಾರದು. ನನ್ನ ನಿರ್ಧಾರವನ್ನು ಗೌರವಿಸಿ, ನನ್ನ ಮಾರ್ಗವನ್ನು ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ ಎಂದು ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
Key words: Kiccha Sudeep, tweets, refusing ,state award