ಮೈಸೂರು,ಜನವರಿ,29,2025 (www.justkannada.in): ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಆಕ್ಷೇಪಾರ್ಹ ಪದ ಬಳಸಿದ್ದಾರೆನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಭಾಪತಿ ಅವರ ನಿಲುವಿಗೆ ನಾನು ಬದ್ದನಾಗಿದ್ದೇನೆ. ವಿಧಾನ ಪರಿಷತ್ ನಲ್ಲಿ ನಡೆದಿರುವ ಘಟನೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಧಾನಸಭೆ ಸ್ಫೀಕರ್ ಯು ಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದ ಪಾಲ್ಗೊಂಡು ಸ್ಪೀಕರ್ ಆದ ಸಂದರ್ಭವನ್ನು ಮೆಲುಕು ಹಾಕಿದ ಸ್ಪೀಕರ್ ಯುಟಿ ಖಾದರ್, ನನಗೆ ಮಂತ್ರಿಯಾಗುವ ಅವಕಾಶವಿತ್ತು. ಈ ನಡುವೆ ಸ್ಪೀಕರ್ ಹುದ್ದೆ ದೊರತದ್ದು ಸಂತಸ ತಂದಿದೆ. ಸ್ಪೀಕರ್ ಆದ ನಂತರ ಎಲ್ಲರನ್ನೂ ಪಕ್ಷಾತೀತವಾಗಿ ನೋಡುತ್ತಿದ್ದೇನೆ. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರುಗಳನ್ನು ಸಮಾನವಾಗಿ ಕಾಣುತ್ತಿದ್ದೇನೆ. ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಆಡಳಿತ, ಪ್ರತಿಪಕ್ಷಗಳ ಜಟಾಪಟಿ ಬಳಿಕ ಸ್ಪೀಕರ್ ವಿರುದ್ದವೂ ದೂರುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗು ಆಗಿದೆ. ಬಹುತೇಕ ಶಾಸಕರು ಅಧಿವೇಶನದಲ್ಲಿ ಸಮರ್ಪಕವಾಗಿ ಪಾಲ್ಗೊಳ್ಳುವುದಿಲ್ಲ. ಪ್ರಮುಖ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವಾಗಲೂ ಅಸೆಂಬ್ಲಿ ಖಾಲಿಯಾಗಿರುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ವಿಧಾನ ಮಂಡಲ ಅಧಿವೇಶನಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಆಗುತ್ತದೆ. ಹಾಗಾಗಿ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಜವಾಬ್ದಾರಿ ಅರಿತುಕೊಂಡು ಭಾಗಿಯಾಗಬೇಕು. ಎಲ್ಲಾ ಶಾಸಕರ ಸಮಸ್ಯೆಗಳನ್ನು ನಾನು ಆಲಿಸುತ್ತೇನೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
ವಿಧಾನ ಮಂಡಲದ ಅಧಿವೇಶನದಲ್ಲಿ ಗುಣಮಟ್ಟದ ಚರ್ಚೆ ನಡೆಯುವ ಅಗತ್ಯವಿದೆ. ವಿಷಯಾಧಾರಿತ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವೈಯುಕ್ತಿಕ ಮಟ್ಟದಲ್ಲಿ ನಡೆಯುವ ಚರ್ಚೆಗೆ ಹೆಚ್ಚಿನ ಆದ್ಯತೆ ಕೊಡಬಾರದು. ಇದರಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದವರು ಶಾಸನ ಸಭೆಗೆ ಆರಿಸಿ ಬರುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಉದ್ಯಮಿಗಳು ಶಾಸನಸಭೆ ಪ್ರವೇಶಿಸಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಏನಾಗಲಿದೆಯೋ ಗೊತ್ತಿಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಗೆಲುವಿನ ಮಾನದಂಡ ಆಧರಿಸಿ ಟಿಕೆಟ್ ನೀಡುತ್ತಿದ್ದಾರೆ. ಜನರೊಂದಿಗೆ ಒಡನಾಟವಿದ್ದು, ಒಳ್ಳೆಯ ಹಿನ್ನೆಲೆ ಇದ್ದರೂ ಟಿಕೆಟ್ ಸಿಗೋದಿಲ್ಲ. ಕೇವಲ ಗೆಲ್ಲುವ ಸಾಧ್ಯತೆ ಇರುವವರಿಗೆ ಮಾತ್ರ ಟಿಕೆಟ್ ಕೊಡ್ತಾರೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಅಧಿವೇಶನ ನಡೆದಾಗಲೂ ಸರಿಯಾಗಿ ಭಾಗವಹಿಸುವುದಿಲ್ಲ. ಶಾಸಕರ ಕಡ್ಡಾಯ ಹಾಜರಿ ಮಾಡಲು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಅವರ ಜವಾಬ್ದಾರಿ ಅರಿತುಕೊಂಡು ಭಾಗಿಯಾಗಬೇಕು ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಹೇಳಿದರು.
Key words: MLC, CT Ravi, Minister, Lakshmi Hebbalkar, Speaker, U.T. Khader, mysore