ಬೆಂಗಳೂರು, ಫೆಬ್ರವರಿ 1,2025 (www.justkannada.in): :- ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE)ರ ಎರಡನೇ ಆವೃತ್ತಿಯ ಸಮಾವೇಶಕ್ಕೆ ರಾಜ್ಯವು ಪ್ರವಾಸೋದ್ಯಮ ಇಲಾಖೆಯ ಮೂಲಕ ಸಜ್ಜಾಗಿದ್ದು,ಫೆಬ್ರವರಿ 26 ರಿಂದ 28 ರಂದು 3 ದಿನಗಳ ಕಾಲ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE) BIEC, ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE)ರ ಎರಡನೇ ಆವೃತ್ತಿಯ ಕರ್ಟನ್ ರೈಸರ್, ಬ್ರೋಚರ್ ಮತ್ತು ಲಾಂಛನವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು
ಕರ್ನಾಟಕವನ್ನು ಪ್ರಮುಖ ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವುದಲ್ಲದೆ, ಸಮಾಜವನ್ನು ಮೇಲೆತ್ತುವ ಮತ್ತು ಶಾಂತಿ, ಪ್ರಬುದ್ಧತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಪ್ರವಾಸೋದ್ಯಮದ ಅಗಾಧ ಶಕ್ತಿಯಲ್ಲಿ ನಂಬಿಕೆಯಿಟ್ಟಿದ್ದೇವೆ ಎಂದರು.
ಕರ್ನಾಟಕದಲ್ಲಿ ಪ್ರವಾಸೋದ್ಯಮವು ಒಂದು ಆರ್ಥಿಕ ಚಾಲಕ ಶಕ್ತಿಯಷ್ಟೇ ಆಗಿರದೇ, ಅದಕ್ಕಿಂತಲೂ ಹೆಚ್ಚಾಗಿ ಇದು ಸಾಮಾಜಿಕ ಒಳಿತಿನ ಬಲವಾಗಿದೆ, ಶಾಂತಿಯುತ ಸಹಬಾಳ್ವೆಯನ್ನು ಬೆಳಸುವ ಸಾಧನವಾಗಿದೆ ಮತ್ತು ಕಲಿಕೆ ಹಾಗೂ ಪ್ರಬುದ್ಧತೆಯ ದಾರಿಯಾಗಿದೆ. ಜಗತ್ತಿನಲ್ಲಿ ಅಡೆತಡೆಗಳು ನಮ್ಮ ನಡುವೆ ಆಗಾಗ ಭಿನ್ನಾಭಿಪ್ರಾಯ ಉಂಟು ಮಾಡುವಾಗ ಪ್ರವಾಸೋದ್ಯಮವು ತಪ್ಪು ತಿಳುವಳಿಕೆಯ ಗೋಡೆಗಳನ್ನು ಒಡೆಯುವ ಮತ್ತು ಪರಸ್ಪರ ಗೌರವ ಹಾಗೂ ಸಮಾನ ಅನುಭವ ಸೇತುಗಳನ್ನು ಸೃಜಿಸುವ ಜೊತೆಗೆ ಜನರನ್ನು ಒಟ್ಟಿಗೆ ಸೇರಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.
ನಾವು, UNESCO ವಿಶ್ವ ಪಾರಂಪರಿಕ ತಾಣಗಳೂ ಸೇರಿದಂತೆ ಕರ್ನಾಟಕದ ಐತಿಹಾಸಿಕ ಅಮೂಲ್ಯ ಸಂಪತ್ತುಗಳನ್ನು ಪ್ರದರ್ಶಿಸುವ ನಮ್ಮ ಸಾಂಸ್ಕೃತಿಕ, ಪಾರಂಪರಿಕ ಸ್ವತ್ತುಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವುದರೊಂದಿಗೆ ಪಾರಂಪರಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದ ಕಡೆ ನಮ್ಮ ಆದ್ಯ ಗಮನವನ್ನು ಕೇಂದ್ರೀಕರಿಸಿದ್ದೇವೆ. ನಮ್ಮ ರಾಜ್ಯದ ಬೌದ್ಧಿಕ ಮತ್ತು ವೈಜ್ಞಾನಿಕ ಸಾಧನೆಗಳಿಗೆ ಯುವ ಮನಸ್ಸುಗಳನ್ನು ಕೂಡಿಸುವ ಮೂಲಕ ಅನುಭವಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸುತ್ತಾ, ಶೈಕ್ಷಣಿಕ ಪ್ರವಾಸೋದ್ಯಮ ಅಭಿವೃದ್ಧಿಗೂ ಬದ್ಧರಾಗಿದ್ದೇವೆ. ಜೊತೆಗೆ, ಆಧ್ಯಾತ್ಮಿಕ ಪ್ರವಾಸೋದ್ಯಮವು ಕರ್ನಾಟಕದ ಪವಿತ್ರ ಯಾತ್ರಾ ಸ್ಥಳಗಳ ಮುಖಾಂತರ ಪ್ರವಾಸಿಗರು ಮನಃಶಾಂತಿ ಹೊಂದಲು ಮಾರ್ಗದರ್ಶನ ನೀಡುತ್ತದೆ. ಕರ್ನಾಟಕದ 320 ಕಿ.ಮೀ. ಉದ್ದದ ಕರಾವಳಿ ತೀರವು ಜಾಗತಿಕವಾಗಿ ಹೆಸರಾಂತ ಪ್ರವಾಸಿ ತಾಣವಾಗುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಇಂದಿನ ಜಗತ್ತು ವಿವಿಧ ನೇತ್ಯಾತ್ಮಕ ವಿಷಮ ಕಾರಣಗಳಿಂದಾಗಿ ವಿಭಾಗೀಯ ವಿಚ್ಛಿದ್ರಕಾರಿ ಪರಿಸ್ಥಿತಿಗೆ ಹೋಗುತ್ತಿದ್ದು ಪ್ರವಾಸೋದ್ಯಮಕ್ಕೆ ಮಾತ್ರ ಇಂತಹ ವಿಭಾಗೀಯ ವಿಚ್ಛಿದ್ರಕಾರಿ ಪರಿಸ್ಥಿತಿಯನ್ನು ತಡೆಯುವ ಶಕ್ತಿಯಿದ್ದು ಜನರ ನಡುವೆ, ರಾಜ್ಯಗಳ ನಡುವೆ ದೇಶ-ದೇಶಗಳ ನಡುವೆ, ಸಂಸ್ಕೃತಿಗಳ ನಡುವೆ ಸೌಹಾರ್ದಯುತ ವಾತಾವರಣವನ್ನು ಉಂಟುಮಾಡುತ್ತದೆ. ಪ್ರವಾಸೋದ್ಯಮವು ಸಮಾಜದ ಎಲ್ಲಾ ವರ್ಗಗಳ ಜನರ ನಡುವೆ
ಸೇತುವೆಯಾಗಿ ಕೆಲಸಮಾಡುವ ಶಕ್ತಿ ಹೊಂದಿದೆ. ಜೀವನದ ವಿವಿಧ ದೃಷ್ಟಿಕೋನಗಳನ್ನು ಭಾವನೆಗಳನ್ನು, ಇತರರಿಗೆ ಪರಸ್ಪರ ಗೌರವವನ್ನು ಪ್ರವಾಸವು ಕಲಿಸಿಕೊಡುತ್ತದೆ. ಜೀವನದ ಕಲೆ. ಸಂತೋಷ ನೆಮ್ಮದಿ, ಶಾಂತಿಯನ್ನು ದೇಶಿ-ವಿದೇಶಿ ಪ್ರವಾಸಿಗರು ನಮ್ಮ ರಾಜ್ಯದಲ್ಲಿ ಪಡೆಯುತ್ತಾರೆ ಎಂದು ತಿಳಿಸಿದರು.
ಕರ್ನಾಟಕ ಪ್ರವಾಸೋದ್ಯಮ ವಲಯವು ಗಮನಾರ್ಹ ಪರಿವರ್ತನಾ ಪಥದಲ್ಲಿದೆ.ನಮ್ಮ ಸರ್ಕಾರವು ನೂತನ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತಂದಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿಯು ಕರ್ನಾಟಕ ರಾಜ್ಯವನ್ನು ಶಾಂತಿ, ಜ್ಞಾನ ಮತ್ತು ಉನ್ನತಿಯ ಸಂಕೇತವನ್ನಾಗಿ ರೂಪಿಸುವ ನಕಾಶೆಯಾಗಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರ ಮುಖಾಂತರ, ನಾವು ಹೆಚ್ಚಿನ ಸಾಮರಸ್ಯ ಮತ್ತು ಪ್ರಬುದ್ಧ ಸಮಾಜವನ್ನು ನಿರ್ಮಿಸಲು ಬಯಸುತ್ತೇವೆ. ರಾಜ್ಯದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳು ಬಂಡವಾಳ ಹೂಡಿಕೆ ಮತ್ತು ಆಕರ್ಷಣೆ, ಕೌಶಲ್ಯಾಭಿವೃದ್ಧಿ ಮೂಲಕ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ನಾವು ಬದ್ಧರಾಗಿದ್ದೇವೆ. ಸಮುದಾಯ ಕೇಂದ್ರಿತ ಉಪಕ್ರಮಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರವಾಸೋದ್ಯಮ ವಲಯದ ಲಾಭ ನೀಡಬೇಕೆನ್ನುವ ಗುರಿಯನ್ನು ಹೊಂದಿದ್ದೇವೆ. “ಸರ್ವರಿಗೂ ಸಮಪಾಲು, ಸಮಬಾಳು” ಪರಿಕಲ್ಪನೆಯ ಮೂಲಕ ಸಮ ಸಮಾಜದ ನಿರ್ಮಾಣದ ಉದ್ದೇಶವನ್ನು ಹೊಂದಿದ್ದೇವೆ ಎಂದರು.
ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE) ಮೂಲಕ ನಮ್ಮ ರಾಜ್ಯದ ವಿವಿಧ ಮತ್ತು ವಿಶಿಷ್ಟ ಪ್ರವಾಸಿ ಉತ್ಪನ್ನಗಳನ್ನು ಈ ಮೂರು ದಿನಗಳ ಕಾಲ ಪ್ರದರ್ಶಿಸಲಿದ್ದೇವೆ. ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣಗಳಲ್ಲದೇ, ಅಲ್ಪ ಪರಿಚಿತ ಪ್ರವಾಸಿ ತಾಣಗಳನ್ನು ಈ ಸಂದರ್ಭದಲ್ಲಿ ಎಲ್ಲರಿಗೂ ಪ್ರದರ್ಶನ ಮಾಡುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಮೂಲಕ ಅಭಿವೃದ್ಧಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ.
ಈ ಸುಸಂದರ್ಭದಲ್ಲಿ ಪ್ರವಾಸೋದ್ಯಮ ವಲಯದ ಎಲ್ಲಾ ಭಾಗಿದಾರರನ್ನು ನಮ್ಮ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ನಕಾಶೆಯನ್ನು ಪ್ರಜ್ವಲಿಸುವಂತೆ ಮಾಡಲು ನಾನು ಆಹ್ವಾನ ನೀಡುತ್ತಿದ್ದೇನೆ. ಸಮಾನತೆ, ಸಹಭಾಗಿತ್ವ ಸಹಬಾಳ್ವೆ, ಸಮಾನ ಅವಕಾಶ, ಸಮಾನ ಗುರಿ-ಉದ್ದೇಶಗಳ ಮೂಲಕ ನಮ್ಮ ರಾಜ್ಯವನ್ನು ದೇಶದಲ್ಲಿಯೇ ದೇಶಿಯ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರಿಸಲು ಮತ್ತು ಅಂತರಾಷ್ಟ್ರೀಯ ಪ್ರವಾಸೋದ್ಯಮ ನಕಾಶೆಯಲ್ಲಿ ಪ್ರಖ್ಯಾತಿಯನ್ನು ಹೆಚ್ಚಿಸಲು ಶಕ್ತಿಮೀರಿ ಪ್ರಯತ್ನಿಸೋಣ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಾಜನೀಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ, ನಿರ್ದೇಶಕ ಡಾ. ರಾಜೇಂದ್ರ ಕೆ.ವಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
key words: Karnataka International Travel Expo, Tourism Minister, H.K. Patil