ಮೈಸೂರು,ಫೆಬ್ರವರಿ,4,2025 (www.justkannada.in): ಇಂದು ರಥಸಪ್ತಮಿ ಅಂಗವಾಗಿ ಮೈಸೂರಿನ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಸೂರ್ಯಯಜ್ಞ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯೋಗ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಸೂರ್ಯಯಜ್ಞ ಕಾರ್ಯಕ್ರಮದಲ್ಲಿ ಯೋಗಬಂಧುಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಯವರು ಮತ್ತು ಯೋಗಾಸಕ್ತ ನಾಗರೀಕರು ಪಾಲ್ಗೊಂಡಿದ್ದರು.
ಯೋಗ ಒಕ್ಕೂಟ 2001 ರಲ್ಲಿ ಪ್ರಾರಂಭವಾಗಿ ಅನೇಕ ಯೋಗ ಮತ್ತು ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ರಥಸಪ್ತಮಿ ಅಂಗವಾಗಿ ಸಾಮೂಹಿಕ 108 ಸೂರ್ಯ ನಮಸ್ಕಾರಗಳು ಮತ್ತು ಸೂರ್ಯ ಯಜ್ಞ ಧಾರ್ಮಿಕ ಕಾರ್ಯಕ್ರಮವನ್ನು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸುತ್ತಾ ಬಂದಿದೆ.
ಅಲ್ಲದೆ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳಾದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಯೋಗಚಿತ್ರಕಲಾ ಸ್ಪರ್ಧೆ, ಜನ ಸಾಮಾನ್ಯರಲ್ಲಿ ಆರೋಗ್ಯದ ಅರಿವು ಮೂಡಿಸಲು ಉಚಿತವಾಗಿ ಸರ್ಕಾರಿ ಆಯುರ್ವೇದ ಮತ್ತು ಜೆ.ಎಸ್.ಎಸ್. ಆಯುರ್ವೇದ ಕಾಲೇಜಿನ ವೈದ್ಯರ ಸಹಕಾರದೊಂದಿಗೆ ಆರೋಗ್ಯ ಸಪ್ತಾಹ ಮತ್ತು ಯೋಗ ಕಾರ್ಯಾಗಾರವನ್ನು ಯೋಗ ಒಕ್ಕೂಟ ಆಗಾಗ ಆಯೋಜಿಸುತ್ತಿದೆ. ಜೊತೆಗೆ ಮೈಸೂರು ಯೋಗ ಸಂಸ್ಥೆಗಳ ಜೊತೆಗೂಡಿ ಪ್ರತಿವರ್ಷ ಜೂನ್ 21 ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿದೆ.
Key words: mysore, Rathasaptami, Surya Namaskar