ಧಾರ್ಮಿಕ ನಂಬಿಕೆ, ಆಚರಣೆಗಳನ್ನ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ – ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಫೆಬ್ರವರಿ,5,2025 (www.justkannada.in):  ಧರ್ಮ, ಧಾರ್ಮಿಕ ನಂಬಿಕೆ, ಆಚರಣೆಗಳಲ್ಲಿ ಬಿಜೆಪಿ ರಾಜಕೀಯ ಹುಡುಕುತ್ತಿದೆ.  ಬಿಜೆಪಿ ಇವುಗಳನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾವುದೇ ಧರ್ಮದ ಬಗ್ಗೆ ಶ್ರದ್ದೆ, ಆಚರಣೆ, ನಂಬಿಕೆಗಳು ಆಯಾಯ ವ್ಯಕ್ತಿಗೆ ಸಂಬಂಧಿಸಿದ ವಿಚಾರಗಳು. ನಾವು ಪ್ರತಿಯೊಂದಕ್ಕೂ ಗೌರವ ನೀಡಬೇಕು. ಆದರೆ ಇವುಗಳನ್ನು ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದರು.

ಕುಂಭಮೇಳದಲ್ಲಿ ಪಾಲ್ಗೊಳ್ಳುವ ಬಗ್ಗೆ ಆರ್.ಅಶೋಕ್ ಅವರು ಟ್ವೀಟ್ ನಲ್ಲಿ ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅಶೋಕ್ ಅವರ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಯಾರು ಏನಾದರೂ ಹೇಳಿಕೊಳ್ಳಲಿ, ನಮ್ಮ ಧರ್ಮ, ನಮ್ಮ ಕರ್ಮ, ಆಚಾರ ವಿಚಾರ ಅನವಶ್ಯಕವಾಗಿ ಈ ವಿಚಾರಗಳನ್ನು ಎಳೆದಾಡಲು ನಾನು ಹೋಗುವುದಿಲ್ಲ ಎಂದರು.

ಅಶೋಕ್ ಅವರು ಟ್ವೀಟ್ ಆದರೂ ಮಾಡಲಿ, ಭಾಷಣವಾದರೂ ಮಾಡಲಿ ಅವರಿಗೆ ಉತ್ತರ ನೀಡಲು ನನಗೆ ಇಷ್ಟ ಇಲ್ಲ. ಕೆಲವರಿಗೆ ನನ್ನ ಹೆಸರು ಹೇಳದಿದ್ದರೆ ಮಾರ್ಕೆಟ್ ಇರುವುದಿಲ್ಲ. ನನ್ನ ಹೆಸರು ತೆಗೆದುಕೊಳ್ಳದಿದ್ದರೆ, ನಿದ್ದೆಯೂ ಬರುವುದಿಲ್ಲ, ಶಕ್ತಿಯೂ ಬರುವುದಿಲ್ಲ ಎಂದು ಟಾಂಗ್ ಕೊಟ್ಟರು.

ಇನ್ನು  ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ಪ್ರಸ್ತಾವನೆ  ಸಲ್ಲಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.

Key words: BJP, religious beliefs, politics, DCM, DK Shivakumar