ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಾಯಿ, ಮಗ ಆತ್ಮಹತ್ಯೆ: ಕುಟುಂಬಸ್ಥರಿಗೆ  ಆರ್.ಅಶೋಕ್ ಸಾಂತ್ವನ

ಮಂಡ್ಯ,ಫೆಬ್ರವರಿ,6,2025 (www.justkannada.in): ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ತಾಯಿ ಮತ್ತು ಮಗ ಆತ್ಮಹತ್ಯೆಗೆ ಶರಣಾದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಪಕ್ಷ ನಾಯಕ ಆರ್.ಅಶೋಕ್ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಕೊನ್ನಾಪುರ ಗ್ರಾಮದ ಪ್ರೇಮಾ ಎಂಬುವವರು 2018ರಲ್ಲಿ ಉಜ್ಜೀವನ್ ಬ್ಯಾಂಕ್ ನಲ್ಲಿ 6 ಲಕ್ಷ ಸಾಲ ಪಡೆದಿದ್ದರು. ಆದರೆ ಮೂರು ತಿಂಗಳ ಕಂತು ಕಟ್ಟದ ಹಿನ್ನೆಲೆ  ಉಜ್ಜೀವನ್ ಬ್ಯಾಂಕ್ ನವರು ಮನೆ ಸೀಜ್ ಮಾಡಿದ್ದರು.  ಇದರಿಂದ ಮನನೊಂದು ಜನವರಿ 28 ರಂದು ಪ್ರೇಮ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ತಾಯಿ ಸಾವಿನಿಂದ ನೊಂದ ಮಗ ರಂಜಿತ್ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದೀಗ ಇಂದು ವಿಪಕ್ಷ ನಾಯಕ ಆರ್. ಅಶೋಕ್ ಗ್ರಾಮಕ್ಕೆ ತೆರಳಿ ಮೃತ ಪ್ರೇಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.  ಆರ್. ಅಶೋಕ್ ಗೆ ಜೆಡಿಎಸ್ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಇಂಡುವಾಳು ಸಚ್ಚಿದಾನಂದ ಮತ್ತಿತರರ ಸಾಥ್ ನೀಡಿದರು.

ಮನೆ ಸೀಜ್ ವೇಳೆ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ಆರ್.ಅಶೋಕ್ ಬಳಿ ಮೃತ ಪ್ರೇಮ  ಅವರು ಪುತ್ರಿಯರು ಅಳಲು ತೋಡಿಕೊಂಡರು. ಇದೇ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆರ್.ಅಶೋಕ್,  ಪೊಲೀಸರಿಗೆ ಮಾನವೀಯತೆ ಬೇಕಲ್ಲ. ಮಗುವನ್ನ ಮನೆಯಿಂದ ಹೊರಗೆ ಕರೆದುಕೊಂಡು ಹೋಗುವಷ್ಟು ಸಮಯ ಕೊಟ್ಟಿದ್ದರೇ ಏನಾಗುತ್ತಿತ್ತು ಎಂದು ಕಿಡಿಕಾರಿದರು.

Key words: Mandya, microfinance, harassment, R. Ashok