ಮೈಸೂರು,ಫೆಬ್ರವರಿ,7,2025 (www.justkannada.in): ರಾಜಕೀಯ ಪ್ರೇರಿತವಾಗಿ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರಾಕರಿಸಿರುವ ಹೈಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಸಹಿಸದೆ ಬಿಜೆಪಿ ಮತ್ತು ಜೆಡಿಎಸ್ ನವರ ಕುತಂತ್ರ ರಾಜಕಾರಣಕ್ಕೆ ತಡೆ ಒಡ್ಡಿದಂತಾಗಿದೆ. ಮುಡಾ ಪ್ರಕರಣದಲ್ಲಿ ಅನವಶ್ಯಕವಾಗಿ ಮುಖ್ಯಮಂತ್ರಿಗಳ ಹೆಸರನ್ನು ಎಳೆದು ತಂದು ರಾಜ್ಯದ ರಾಜಕಾರಣಕ್ಕೆ ಮಸಿ ಬಳಿಯಲು ಪ್ರಯತ್ನಿಸಿದವರಿಗೆ ಸರಿಯಾದ ಉತ್ತರ ದೊರೆತಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಮೇಲೆ ಮತ್ತು ಸರ್ಕಾರದ ಮೇಲೆ ಆರೋಪ ಮಾಡುವಾಗ ಬಹಳ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ. ಇದು ಮುಖ್ಯಮಂತ್ರಿಗಳಿಗೆ ಮಾತ್ರ ಆರೋಪಗಳು ಅನ್ವಯಿಸುವುದಿಲ್ಲ, ರಾಜ್ಯದ ಜನತೆಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುವುದರಿಂದ ಇಡೀ ರಾಜ್ಯದ ಜನತೆಗೆ ಅನ್ವಯಿಸುವ ವಿಚಾರವಾಗಿರುತ್ತದೆ.
ಕರ್ನಾಟಕ ರಾಜ್ಯದ ರಾಜಕಾರಣ ದೇಶಕ್ಕೆ ಮಾದರಿಯಾಗಿರಬೇಕೆ ಹೊರತು ವೈಯಕ್ತಿಕ ದ್ವೇಷದಿಂದ ಆರೋಪ ಮಾಡುವುದು ಅತ್ಯಂತ ಕೆಟ್ಟ ಸಂಪ್ರದಾಯ. ಇಂತಹ ಕೆಟ್ಟ ಸಂಪ್ರದಾಯ ಕೊನೆಗಾಣಿಸುವ ಹೊಣೆಗಾರಿಕೆ ಪ್ರತಿಯೊಬ್ಬರದಾಗಿರುತ್ತದೆ. ಇದರಲ್ಲಿ ನ್ಯಾಯಾಲಯದ ಪಾತ್ರವೂ ಇರುತ್ತದೆ. ಆದ ಕಾರಣ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯ ನ್ಯಾಯ ಸಮ್ಮತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರ ಬಗ್ಗೆ ವೈಯಕ್ತಿಕ ದ್ವೇಷಕ್ಕೆ ಮಾತನಾಡಿದರೆ ಕರ್ನಾಟಕ ರಾಜ್ಯದ ರಾಜಕಾರಣಕ್ಕೆ , ಆಡಳಿತಕ್ಕೆ ಮತ್ತು ಜನತೆಗೆ ಮಾಡಿದ ಅಪಚಾರವೆಂದೆ ಭಾವಿಸಬೇಕಾಗುತ್ತದೆ. ಮುಖ್ಯಮಂತ್ರಿಗಳಾಗಿ ದೇಶದ ಎಲ್ಲೆಡೆ ಹಾಗೂ ವಿದೇಶಗಳಲ್ಲಿಯೂ ರಾಜ್ಯದ ಪ್ರತಿನಿಧಿಯಾಗಿ ಕೆಲಸ ಮಾಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕರ್ನಾಟಕದ ಬಗ್ಗೆ ಇರುವ ಘನತೆ ಗೌರವ ಕಮ್ಮಿಯಾಗುತ್ತದೆ ಎಂಬುದನ್ನು ಕೂಡ ಆಲೋಚಿಸಬೇಕಾಗುತ್ತದೆ.
ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗಲೇ ಸಿಬಿಐ ತನಿಖೆಗೆ ಒತ್ತಾಯಿಸುವುದು ನ್ಯಾಯ ಸಮತವಲ್ಲ ಎಂಬುದು ತೀರ್ಪಿನಿಂದ ಸಾಬೀತಾಗಿದೆ. ಲೋಕಾಯುಕ್ತ ತನಿಖೆಯ ಅಂತಿಮ ತೀರ್ಪು ಬರುವುದಕ್ಕೆ ಮೊದಲೇ ಎಲ್ಲವನ್ನು ಊಹಿಸಿಕೊಂಡು ಮಾತನಾಡುವ ವ್ಯಕ್ತಿಗಳ ಹಿಂದೆ ಯಾವ ಮರ್ಮ ಅಡಗಿದೆ ಎಂಬುದನ್ನು ಎಲ್ಲರಿಗೂ ಗೋಚರವಾಗುತ್ತದೆ. ಈ ತೀರ್ಪಿನಿಂದ ಸಿದ್ದರಾಮಯ್ಯನವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಬೆಂಬಲ ದೊರಕಿದಂತಾಗಿದೆ ಎಂದು ಎಚ್.ಎ. ವೆಂಕಟೇಶ್ ತಿಳಿಸಿದ್ದಾರೆ.
Key words: Rejection, CBI, Muda case, High Court, H. A Venkatesh