ಬಿಎಸ್ ವೈ ಬಗ್ಗೆ ಹಾದಿ ಬೀದಿಲಿ ನಿಂತು ಯಾರೂ ಮಾತನಾಡಬಾರದು- ಯತ್ನಾಳ್ ವಿರುದ್ದ ಎಲ್.ನಾಗೇಂದ್ರ ಕಿಡಿ

ಮೈಸೂರು,ಫೆಬ್ರವರಿ,7,2025 (www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಸೆಡ್ಡುಹೊಡೆದು ಪದೇ ಪದೇ ಕೆಂಡಕಾರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಮಾಜಿ ಶಾಸಕ, ಮೈಸೂರು ನಗರ ಘಟಕದ ಅಧ್ಯಕ್ಷ ಎಲ್ ನಾಗೇಂದ್ರ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಲ್. ನಾಗೇಂದ್ರ, ಯಡಿಯೂರಪ್ಪ ಬಗ್ಗೆ ಹಾದಿ ಬೀದಿಲಿ ನಿಂತು ಯಾರೂ ಮಾತನಾಡಬಾರದು. ಬಿಜೆಪಿಯನ್ನ ತಳಮಟ್ಟದಿಂದ ಪಕ್ಷ ಕಟ್ಟಿದವರು ಯಡಿಯೂರಪ್ಪ. ಎರಡು ಸ್ಥಾನ ಇದ್ದ ಪಕ್ಷವನ್ನ ಈ ಮಟ್ಟಕ್ಕೆ ತರುವಲ್ಲಿ ಅವರ ಪಾತ್ರ ಅಪಾರವಾಗಿದೆ ಅವರ ಬಗ್ಗೆ ಯಾರೇ ಹಗುರವಾಗಿ  ಮಾತನಾಡಿದರೆ ನಾವು ಸಹಿಸಲ್ಲ ಎಂದು ಹೇಳಿದರು.

ಯತ್ನಾಳ್ ಒಬ್ಬ ಎಂಎಲ್ಎ ಅಷ್ಟೇ. ನಾನೂ ಕೂಡ ಎಂಎಲ್ಎ ಆಗಿದ್ದವನೇ. ಬಾಯಿಗೆ ಬಂದ ಹಾಗೆ ಸುಖ ಸುಮ್ಮನೆ ಮಾತನಾಡಿದ್ರೆ ಕಾರ್ಯಕರ್ತರಾಗಿ ಸಹಿಸಲ್ಲ. ಪಕ್ಷದ ಮಾನ ಮರ್ಯಾದೆಯನ್ನ ಬೀದಿಯಲ್ಲಿ ಕಳೆಯೋಕೆ ಹೋಗಬೇಡಿ. ಬೇಕಿದ್ದರೇ ಹೈಕಮಾಂಡ್ ಜೊತೆ ಕುಳಿತು ಮಾತನಾಡಿ ಎಂದು ಸಲಹೆ ನೀಡಿದರು.

ವಿಜಯೇಂದ್ರ ಅವರನ್ನ ಆಯ್ಕೆ ಮಾಡಿರುವರು ರಾಷ್ಟ್ರೀಯ ನಾಯಕರು. ಆದರೆ ಹಾದಿ ಬೀದಿಯಲ್ಲಿ ಮಾತನಾಡಿ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ಇವರ ನಡೆಯಿಂದ ಕಾರ್ಯಕರ್ತರಿಗೆ ಭಾರಿ ನೋವುಂಟಾಗಿದೆ. ರಾಜ್ಯದಲ್ಲಿ  ಕಾಂಗ್ರೆಸ್ ದುರಾಡಳಿತದಿಂದಾಗಿ ನಾಳೆ ಚುನಾವಣೆ ಬಂದರೂ ಕೂಡ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಇಂತಹ ಸಂದರ್ಭದಲ್ಲಿ ಹಾದಿ ಬೀದಿಯಲ್ಲಿ ಗಲಾಟೆ ಮಾಡಿಕೊಂಡು ಕಾರ್ಯಕರ್ತರ ತಲೆ ತಗ್ಗಿಸುವ ಹಾಗೆ ಮಾಡಬೇಡಿ ಎಂದು  ಎಲ್ ನಾಗೇಂದ್ರ ಹರಿಹಾಯ್ದರು.

Key words: mysore, L. Nagendra, BSY , Basanagowda Patil Yatnal