ಗದಗ,ಫೆಬ್ರವರಿ,10,2025 (www.justkannada.in): ಹುಲಕೋಟಿ ಹುಲಿ ಎಂದು ಪ್ರಸಿದ್ಧರಾಗಿದ್ದ ಗದಗ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ ಕೆ.ಎಚ್ ಪಾಟೀಲ್ ಅವರ, ಸಮಾಧಿಗೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ ಎಸ್ ಸಂಗ್ರೇಶಿ ಅವರು ಇಂದು ಭೇಟಿ ನೀಡಿದರು.
ಸಮಾಜ ಸುಧಾರಣೆಯ ಹರಿಕಾರ ಕೆ. ಎಚ್ ಪಾಟೀಲ್ ಅವರ 33ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಿನ್ನೆಲೆ ಗದಗ ಜಿಲ್ಲೆಯ ಅವರ ಹುಟ್ಟೂರು ಹುಲಕೋಟಿ ಗ್ರಾಮದ ಮುಕ್ತಿವನದಲ್ಲಿರುವ ಅವರ ಸಮಾಧಿ ಬಳಿಗೆ ಕುಟುಂಬ ಸಮೇತರಾಗಿ ತೆರಳಿ ಸಮಾಧಿಗೆ ಹೂವಿನ ಹಾರ ಹಾಕಿ ಪುಣ್ಯಸ್ಮರಣೆಯಲ್ಲಿ ಭಾಗಿಯಾದರು. ಈ ಮೂಲಕ ರಾಜ್ಯ ಕಂಡ ಅಪರೂಪದ ನಾಯಕನಿಗೆ ಜಿ. ಎಸ್ ಸಂಗ್ರೇಶಿ ಅವರು ಗೌರವ ಸಮರ್ಪಿಸಿದರು.
ಬಳಿಕ ಮಾತನಾಡಿದ ಜಿ.ಎಸ್ ಸಂಗ್ರೇಶಿ ಅವರು, ಕೆ ಎಚ್ ಪಾಟೀಲ್ ಅವರ ಸಮಾಧಿ ಇರುವ ಮುಕ್ತಿವನ ನಿಜಕ್ಕೂ ವಿಶೇಷದಲ್ಲಿ ವಿಶೇಷವಾದದ್ದು. ಕೆ.ಎಚ್ ಪಾಟೀಲ್ ಅವರು ದೂರದೃಷ್ಠಿಯಿಂದ ಈ ಸ್ಮಶಾನವನ್ನು ಮಾಡಿ ಅದಕ್ಕೆ ಮುಕ್ತಿವನ ಎಂದು ಹೆಸರು ಇಟ್ಟಿದ್ದರು. ಸುಮಾರು 9 ಎಕರೆ ಪ್ರದೇಶವನ್ನು ಈ ಮುಕ್ತಿವನ ಸ್ಮಶಾನ ಹೊಂದಿದೆ. ಇಡೀ ದೇಶದಲ್ಲಿ ಇಂತಹ ಮುಕ್ತಿವನ ಎಲ್ಲಿಯೂ ಇಲ್ಲ. ಈ ಮುಕ್ತಿವನದ ವಿಶೇಷ ಅಂದರೆ ಈ ಮುಕ್ತಿವನದ ಸ್ಮಶಾನ ಯಾವುದೇ ಜಾತಿ ಧರ್ಮಕ್ಕೆ ಸೇರಿಲ್ಲ. ಯಾವುದೇ ಜಾತಿಯವರಾಗಲಿ ಧರ್ಮದವರಾಗಲಿ ಮೃತಪಟ್ಟರೇ ಇಲ್ಲಿ ಅಂತ್ಯಕ್ರಿಯೆ ನೆರವೇರಿಸಬಹುದಾಗಿದೆ. ಇಲ್ಲಿ ಹೂಳುವುದು ಹಾಗೂ ಸುಡುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಯಾವುದೇ ಭೇದ ಭಾವವಿಲ್ಲದೆ ಬಡವ ಶ್ರೀಮಂತರೆಂಬ ತಾರತಮ್ಯವಿಲ್ಲದೆ ಎಲ್ಲಾ ಸಮಾಜದವರು ಧರ್ಮದವರು ಮೃತಪಟ್ಟವರ ಅಂತ್ಯಕ್ರಿಯೆಯನ್ನು ನೆರವೇರಿಸುತ್ತಾರೆ. ಸಾಮರಸ್ಯದ ಇಂತಹ ಅಪರೂಪದ ಸ್ಥಳಕ್ಕೆ ಭೇಟಿ ನೀಡುವುದೇ ವಿಶೇಷ ಎಂದರು.
ಇಂತಹ ಭಾವೈಕ್ಯತೆಯ ಸಂದೇಶವನ್ನು ಸಾರುತ್ತಿರುವ ಅಪರೂಪದ ಸ್ಮಶಾನ ಪ್ರತಿ ಗ್ರಾಮ ಪ್ರತಿ ತಾಲ್ಲೂಕು ಪ್ರತಿ ಜಿಲ್ಲೆ ಪ್ರತಿ ರಾಜ್ಯದಲ್ಲೂ ಮಾಡಬೇಕು. ಈ ಮೂಲಕ ನಾವೆಲ್ಲರೂ ಒಂದು ಎಂಬ ಸಂದೇಶವನ್ನು ಎಲ್ಲರಲ್ಲೂ ಮೂಡಿಸಬಹುದು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ ಎಸ್ ಸಂಗ್ರೇಶಿ ಅಭಿಪ್ರಾಯಪಟ್ಟರು.
Key words: K.H. Patil, gadag, State Election Commissioner, G.S. Sangreshi