ಮೈಸೂರು,ಫೆಬ್ರವರಿ,11,2025 (www.justkannada.in): ನಗರದ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿದ ವೇಳೆ ಬಿಜೆಪಿ- ಕಾಂಗ್ರೆಸ್ ನಡುವೆ ಹೈಡ್ರಾಮಾ ನಡೆದಿದೆ.
ಹೌದು, ವಿಪಕ್ಷ ನಾಯಕ ಆರ್ ಅಶೋಕ್ ಉದಯಗಿರಿ ಪೋಲಿಸ್ ಠಾಣೆ ಭೇಟಿ ನೀಡಿದ್ದು, ಇತ್ತ ಕಾಂಗ್ರೆಸ್ ಮುಖಂಡರು ಸಹ ಪೋಲಿಸ್ ಠಾಣೆಗೆ ಬರಲು ಯತ್ನಿಸಿದ್ದಾರೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಮಾಜಿ ಮೇಯರ್ ಅಯೂಬ್ ಖಾನ್ ಸೇರಿದಂತೆ ಹಲವಾರು ಮುಖಂಡರು ಪೊಲೀಸ್ ಠಾಣೆಗೆ ಆಗಮಿಸಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಅವರನ್ನ ಮಾರ್ಗಮಧ್ಯದಲ್ಲೇ ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಲಿಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಇತ್ತ ಬಿಜೆಪಿ ಕಾರ್ಯಕರ್ತರು ಅರ್ ಅಶೋಕ್ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಪಟ್ಟು ಹಿಡಿದಿದ್ದು ಸ್ಥಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಹೈಡ್ರಾಮಾ ನಡೆಯಿತು.
ಪೋಲಿಸ್ ಠಾಣೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಹುಬ್ಬಳ್ಳಿ ಗಲಾಟೆಯಲ್ಲಿ ಆರೋಪಿಗಳನ್ನು ಖುಲಾಸೆ ಮಾಡಿ ಸಿಎಂ ಸಿದ್ದರಾಮಯ್ಯ ಇಂತಹವರಿಗೆ ಧೈರ್ಯ ತುಂಬಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದೇ ಸಾಕ್ಷಿ. ಪೊಲೀಸ್ ಅಧಿಕಾರಿಗಳ ಬಗ್ಗೆ ಬಹಳ ಕೆಟ್ಟದಾಗಿ ಸಚಿವ ರಾಜಣ್ಣ ಮಾತನಾಡಿದ್ದಾರೆ. ಪೊಲೀಸ್ ಇಲಾಖೆಯೆ ಸರಿ ಇಲ್ಲ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಹಾಗದರೆ ಪೊಲೀಸ್ ಠಾಣೆ ಮುಚ್ಚಿ ಬಿಡಿ ಎಂದು ಟಾಂಗ್ ಕೊಟ್ಟರು.
ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆ ತರದೆ ಕಾಂಗ್ರೆಸ್ ಅವರ ಅಪ್ಪನ ಮನೆಗಳಿಗೆ ಕರೆದು ಕೊಂಡು ಹೋಗಬೇಕಿತ್ತಾ? ಉದಯಗಿರಿ ಏನೂ ಪಾಕಿಸ್ತಾನದಲ್ಲಿ ಇದೆಯಾ.? ಉದಯಗಿರಿಗೆ ಬೇರೆ ಕಾನೂನು ಇದೆಯಾ.? ಆ ಮಂತ್ರಿಗೇನು ಕಾಮನ್ ಸೆನ್ಸ್ ಇಲ್ವಾ.? ಅಂಬೇಡ್ಕರ್ ಅವರ ಕಾನೂನು ಉದಯಗಿರಿಗೆ ಅನ್ವಯ ಆಗಲ್ವಾ? ಸ್ವಲ್ಪ ಯಾಮಾರಿದ್ದರೆ ಪೊಲೀಸ್ ಠಾಣೆಯೆ ಉಡೀಸ್ ಮಾಡಿ ಬಿಡುತ್ತಿದ್ದರು. ಈ ದೇಶದಲ್ಲಿ ಏನೇ ನಡೆದರೂ ಆರ್ ಎಸ್ ಎಸ್ ಕಾರಣನಾ.? ಈ ಸರಕಾರ ಬದುಕಿದ್ಯಾ ಸತ್ತಿದ್ಯಾ? ಗೊತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ. ಆ ದೇವರೇ ಕಾಪಾಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಇರುವುದು ಕೇವಲ ಆರು ತಿಂಗಳು. ನಾನೀಗಾಗಲೇ ನವಂಬರ್ 15 ಅಂತ ಹೇಳಿದ್ದೀನಿ. ಇರೋದ್ರೊಳಗೆ ಒಳ್ಳೆ ಕೆಲಸ ಮಾಡಿ. ಒಳಿತು ಮಾಡು ಮನುಷ್ಯ ನೀ ಇರೋದು ಮೂರೇ ದಿವಸ ಎನ್ನುವ ಹಾಗೆ ಇರುವುದರೊಳಗೆ ಉದಯಗಿರಿ ಪೋಲಿಸ್ ಠಾಣೆಯನ್ನ ಉಳಿಸುವ ಕೆಲಸ ಮಾಡಿ ಎಂದು ಆರ್.ಅಶೋಕ್ ಹೇಳಿದರು.
Key words: Udayagiri, Police Station, BJP, Congress