ಮಾಜಿ ಸಂಸದ ಪ್ರತಾಪ್, ತಮ್ಮ ಕೊಳಕು ಮೆದುಳಿಗೆ ಬುದ್ದಿ ಹೇಳಲಿ: ಎಚ್.ಎ.ವೆಂಕಟೇಶ್

ಮೈಸೂರು,ಫೆಬ್ರವರಿ,12,2025 (www.justkannada.in): ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿರುವ ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್, ಪ್ರತಾಪ್ ಸಿಂಹ ತಮ್ಮ ಕೊಳಕು ಮೆದುಳಿಗೆ ಬುದ್ದಿ ಹೇಳಲಿ ಎಂದು ಕಿಡಿಕಾರಿದ್ದಾರೆ.

ಗಲಭೆ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಹೆಚ್ ಎ ವೆಂಕಟೇಶ್,  ಕೋಮು ಗಲಭೆಗೆ ಅವಕಾಶವಿಲ್ಲದಂತೆ ಶಾಂತವಾಗಿರುವ ರಾಜ್ಯವನ್ನು ಪ್ರಕ್ಷುಬ್ಧಗೊಳಿಸಲು ಸಮಾಜಘಾತುಕ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಇದರ ಭಾಗವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ  ಒಂದು ಧರ್ಮವನ್ನು ಹೀಯಾಳಿಸುವ ಪೋಸ್ಟ್‌ ಗಳನ್ನು ಹಾಕುವ ಮೂಲಕ ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಸ್ನೇಹಮಯ ವಾತಾವರಣ ಹಾಳುಗೆಡವಲು ದುಷ್ಕರ್ಮಿಯೊಬ್ಬ ಯತ್ನಿಸಿದ್ದಾನೆ. ಈತನನ್ನು   ಬಂಧಿಸಿ  ಮೈಸೂರು ಪೊಲೀಸರು ತ್ವರಿತ ಕ್ರಮ ತೆಗೆದುಕೊಂಡು ಕರ್ತವ್ಯಪರತೆ ಮೆರೆದಿದ್ದಾರೆ  ಎಂದು ಪೊಲೀಸರ ಕ್ರಮವನ್ನ ಶ್ಲಾಘಿಸಿದ್ದಾರೆ.

ಇಂತಹ ಘಟನೆಗಳಿಂದ ಲಾಭ ಪಡೆಯಲು ಸದಾ ಹವಣಿಸುವ ಬಿಜೆಪಿ ನಾಯಕರು, ಈ ದುಷ್ಕೃತ್ಯದೊಂದಿಗೆ ತಮ್ಮ ಅಸ್ತಿತ್ವ ಗುರುತಿಸಿಕೊಳ್ಳಲು ಮುಂದಾಗಿರುವುದು ಚಿಂತಾಜನಕವಾಗಿದೆ.  ತಾವಾಗಿಯೇ ಸಾಮಾಜಿಕ ಸಾಮರಸ್ಯ ಹಾಳುಮಾಡುವುದು, ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಬೊಬ್ಬೆಹೊಡೆಯುವುದು ಬಿಜೆಪಿಯವರ ಹವ್ಯಾಸವಾದಂತಿದೆ.

ಅಶೋಕ್ ಸಹ ಈ ಹಿಂದೆ ಗೃಹ ಸಚಿವರಾಗಿದ್ದರು. ಘಟನೆಗೆ ಕಾರಣ ಏನು ಎನ್ನುವುದನ್ನು ಅರಿತಿದ್ದರೂ ಸಹ ಇವರು ಪ್ರಚೋದನಾಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಪೋಸ್ಟ್ ಮಾಡಿರುವ ದುಷ್ಕರ್ಮಿ ಯಾರು, ಈತನ ಇತಿಹಾಸವೇನು,  ಯಾರೊಂದಿಗೆ ಈತ ಒಡನಾಟ ಹೊಂದಿದ್ದ ಎನ್ನುವುದನ್ನು ಗಮನಿಸಿದರೆ, ಈ ವಿಪಕ್ಷ ನಾಯಕರ ಇಬ್ಬಗೆ ನೀತಿ ಬಯಲಾಗುತ್ತದೆ ಎಂದು ಹೆಚ್.ಎ ವೆಂಕಟೇಶ್ ಟೀಕಿಸಿದ್ದಾರೆ.

ಸಾಮಾಜಿಕ ಮತ್ತು ಧಾರ್ಮಿಕ ಸ್ಥಿಮಿತವಿಲ್ಲದ ಬೀಸು ಹೇಳಿಕೆಗಳಿಗೆ ಹೆಸರಾಗಿರುವ ಹರುಕುಬಾಯಿಯ ಮಾಜಿ ಸಂಸದ ಪ್ರತಾಪ್‌ ಸಿಂಹ ಈ ಘಟನೆಯಲ್ಲೂ ತನ್ನ ಅಮೋಘ ಬುದ್ಧಿಶಕ್ತಿ ಪ್ರದರ್ಶಿಸಿದ್ದಾರೆ.  ಒಂದು ಸಮುದಾಯವನ್ನು ಓಲೈಸುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುವ ಇವರು, ಇಂತಹ ದುರ್ಘಟನೆಗಳಿಗೆ ಕಾರಣವಾಗುವ ಅನಾಹುತಕಾರಿ ಸುಳ್ಳು ಸುದ್ದಿಗಳ ಕಾರ್ಖಾನೆಯಾಗಿರುವ ವ್ಯಾಟ್ಸಪ್ ಯೂನಿವರ್ಸಿಟಿಯ ತಮ್ಮ ಕೊಳಕು ಮೆದುಳುಗಳಿಗೆ ಏಕೆ ಬುದ್ಧಿ ಹೇಳುವುದಿಲ್ಲ ಎನ್ನುವುದು ವಿಚಿತ್ರ ಹಾಗೂ ಚಿಂತೆಯ ವಿಷಯ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧವೂ ಸಹ ಸರ್ಕಾರ ಕ್ರಮ ಕೈಗೊಳ್ಳಲಿ

ಕಾನೂನು ಕೈಗೆತ್ತಿಕೊಳ್ಳುವುದನ್ನು ಯಾರೂ ಕ್ಷಮಿಸುವುದಿಲ್ಲ. ಗೃಹ  ಸಚಿವರಾದ ಡಾ. ಜಿ . ಪರಮೇಶ್ವರ್ ಅವರು ಎಲ್ಲವನ್ನೂ ಗಮನಿಸಿದ್ದಾರೆ. ಸುಳ್ಳು ಹರಡುವ ವಾಟ್ಸಪ್ ಯೂನಿವರ್ಸಿಟಿಯಿಂದ ಹಿಡಿದು ಕಲ್ಲು ತೂರುವ ಎಲ್ಲರನ್ನೂ ಕಾನೂನು ಕ್ರಮಕ್ಕೊಳಪಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಹೀಗಾಗಿ ತಮ್ಮದೇ ಸಂಘಟನೆಯ ದುಷ್ಕರ್ಮಿಯೋರ್ವನ ಕಿಡಿಗೇಡಿತನದಿಂದ ಹಾಳಾಗಿರುವ ಸಾಮರಸ್ಯವನ್ನು ಒಗ್ಗೂಡಿಸಲು ಬಿಜೆಪಿ ನಾಯಕರು ಕೈಜೋಡಿಸಬೇಕು. ಅದು ಬಿಟ್ಟು ಕೆದಕಿ ಮತ್ತೆ ಬೆಂಕಿ ಹಾಕಲು ನೋಡುವ ಕಿಡಿಗೇಡಿ ಮನಸ್ಥಿತಿಯ ಬಿಜೆಪಿ ನಾಯಕರ ವಿರುದ್ಧವೂ ಸಹ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ಹೆಚ್.ಎ ವೆಂಕಟೇಶ್ ಆಗ್ರಹಿಸಿದ್ದಾರೆ.

ಬಿಜೆಪಿ ವಕ್ತಾರ ಎಂ. ಜಿ. ಮಹೇಶ್ ಗೃಹ ಸಚಿವರ ಬಗ್ಗೆ ನೀಡಿರುವ ಹೇಳಿಕೆಯು ಖಂಡನೀಯ. ಪ್ರಬುದ್ಧ, ಅನುಭವಿ ಹಿರಿಯ ಸಚಿವರ ಕುರಿತು ವಿವೇಕದಿಂದ ಮಾತನಾಡಬೇಕು. ಮಹೇಶ್ ಹೇಳಿಕೆ ಅವಿವೇಕದ ಪರಮಾವಧಿ. ಪರಮೇಶ್ವರ್ ಕುರಿತು ಮಾತನಾಡುವ ಯೋಗ್ಯತೆಯು ಮಹೇಶ್ ಗೆ ಇಲ್ಲ. ಇಂಥ ಹೇಳಿಕೆ  ಪುನರಾವರ್ತನೆಯ ಆದರೆ ತಕ್ಕ ಪ್ರಾಯಶ್ಚಿತ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: Former MP, Pratap Simha, dirty brain, lesson, H.A. Venkatesh