ಬೆಂಗಳೂರು,ಫೆಬ್ರವರಿ,13,2025 (www.justkannada.in): ಪ್ರಪಂಚದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿ ಭಾರತ ಹೊರಹೊಮ್ಮಬೇಕೆಂದರೆ ವಿಫುಲ ಉದ್ಯೋಗಾವಕಾಶಗಳಿರುವ ಸರಕು ಸಾಗಣೆ ಕ್ಷೇತ್ರದ ಸುಧಾರಣೆಗೆ ಒತ್ತು ಕೊಡುವುದು ಅಗತ್ಯ ಎಂದು ವೋಲ್ವೊ ಗ್ರೂಪ್ ಅಧ್ಯಕ್ಷ ಹಾಗೂ ಸಿಇಒ ಮಾರ್ಟಿನ್ ಲಾಂಡ್ಸ್ ಟೆಡ್ಟ್ ಗುರುವಾರ ಪ್ರತಿಪಾದಿಸಿದರು.
‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ದಲ್ಲಿ ನಡೆದ ”ನೆಕ್ಟ್ ಮೈಲ್: ಇನ್ನೋವೇಷನ್ಸ್ ಶೇಪಿಂಗ್ ದಿ ಫ್ಯೂಚರ್ ಆಫ್ ಲಾಜಿಸ್ಟಿಕ್ಸ್ʼ (ಭವಿಷ್ಯದ ಹೆಜ್ಜೆ: ಸರಕು ಸಾಗಣೆ ಭವಿಷ್ಯ ರೂಪಿಸುತ್ತಿರುವ ನಾವೀನ್ಯತೆಗಳು) ಗೋಷ್ಠಿಯಲ್ಲಿ ಮಾತನಾಡಿದರು.
“ರಸ್ತೆ ಸಾರಿಗೆ ಮೂಲಕ ಸರಕುಗಳನ್ನು ಸಾಗಿಸುವ ಬೆಳವಣಿಗೆ ಪ್ರಮಾಣ ಇನ್ನು ಎರಡು ದಶಕಗಳಲ್ಲಿ 32 ಸಾವಿರ ಟನ್ ಗಿಂತಲೂ ಹೆಚ್ಚುವ ಅಂದಾಜಿದೆ. ಈ ಎಲ್ಲ ಅಂಕಿ-ಅಂಶಗಳನ್ನು ನೋಡಿದರೆ ಭಾರತದಲ್ಲಿ ಲಾಜಿಸ್ಟಿಕ್ ಕ್ಷೇತ್ರದ ಸುಧಾರಣೆಗೆ ದೊಡ್ಡ ಮಟ್ಟದಲ್ಲಿ ಅವಕಾಶಗಳಿವೆ,ʼʼ ಎಂದರು.
“ವೋಲ್ವೊ ಕಂಪನಿಯು ಭಾರತ, ಫ್ರಾನ್ಸ್, ಇಸ್ರೇಲ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಹೂಡಿಕೆ ಮಾಡುತ್ತಿದ್ದರೂ ಭಾರತವೇ ಮೊದಲ ಆದ್ಯತೆಯಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆಗೆ ಒತ್ತುಕೊಟ್ಟಿದ್ದೇವೆ,ʼʼ ಎಂದ ಮಾರ್ಟಿನ್ ಅವರು, “ದೂರಸಂಪರ್ಕ, ಡಿಜಿಟಲ್ ವಹಿವಾಟು ವಲಯದಲ್ಲಿ ಭಾರತವು ಕ್ರಾಂತಿ ಮಾಡಿದಂತೆ ಲಾಜಿಸ್ಟಿಕ್ ಕಾರಿಡಾರ್, ಗ್ರೀನ್ ಕಾರಿಡಾರ್‌ಗಳ ಅಭಿವೃದ್ಧಿಗೂ ಒತ್ತುಕೊಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಯತ್ನಗಳು ಶ್ಲಾಘನೀಯವಾದುದು,ʼʼ ಎಂದರು.
ಗ್ರಾಮೀಣ ಪ್ರದೇಶದವರಿಗೂ ಒಳ್ಳೆಯ ಉತ್ಪನ್ನಗಳು ಕೈಗೆಟುಕುವ ದರದಲ್ಲಿ ಸಿಗಬೇಕೆಂದರೆ ಸರಕು ಸಾಗಣೆ ಕ್ಷೇತ್ರದಲ್ಲಿ ಬದಲಾವಣೆಗಳಾಗಬೇಕಿದೆ. ಹಸಿರು ಇಂಧನ ಬಳಸಿ ಒಳ್ಳೆಯ ಮೈಲೇಜ್ ಕೊಡುವ ಹಾಗೂ ಚಾಲಕರ ಸುರಕ್ಷತೆಗೆ ಆದ್ಯತೆ ಕೊಡುವ ಸರಕು ವಾಹನಗಳ ಉತ್ಪಾದನೆ ಹೆಚ್ಚಳವಾಗಬೇಕು. ವೋಲ್ವೋ ಕಂಪನಿಯು ಚಾಲಕರ ಕ್ಯಾಬಿನ್ ಗಳನ್ನೂ ಟ್ರ್ಯಾಕಿಂಗ್ ಗೆ ಅನುಕೂಲವಾಗುವಂತೆ ತಂತ್ರಜ್ಞಾನ ಸ್ನೇಹಿಯಾಗಿ ರೂಪಿಸುತ್ತಿದೆ. ತಂತ್ರಜ್ಞಾನ ಬಳಸಿಕೊಂಡು ಜನರ ಜೀವನ ಶೈಲಿ ಸುಧಾರಿಸುವತ್ತ ಗಮನ ಹರಿಸಿದ್ದೇವೆ ಎಂದು ವಿವರಿಸಿದರು.
ಭಾರತದಲ್ಲಿ ರಸ್ತೆಗಳ ಮೇಲೆ ನಿತ್ಯ ಓಡಾಡುವ ಡೇಟಾ ಸಂಗ್ರಹಣೆ ಮಾಡಿ, ವಿಶ್ಲೇಷಣೆ ನಡೆಸಿ ನಿಗಾ ವಹಿಸುವುದು ನಿಜಕ್ಕೂ ಸವಾಲಿನ ಕೆಲಸ. ಈ ವಿಚಾರದಲ್ಲಿ ಟ್ರಕ್ ಉತ್ಪಾದನಾ ಕಂಪನಿಗಳು ಸರ್ವಿಸ್ ಪ್ರೊವೈಡರ್‌ಗಳ ಜತೆ ಕೈಜೋಡಿಸಬೇಕು. ಸರಕಾರವು ಈ ನಿಟ್ಟಿನಲ್ಲಿ ಸಮಗ್ರ ನೀತಿ ರೂಪಿಸಬೇಕು ಎಂದು ಎಲಾಸ್ಟಿಕ್‌ರನ್ ಕಂಪನಿಯ ಸಿಇಒ ಸಂದೀಪ್ ದೇಶ್‌ಮುಖ್ ಅಭಿಪ್ರಾಯಪಟ್ಟರು.
ಪಾಶ್ಚಿಮಾತ್ಯ ದೇಶಗಳಲ್ಲಿ ಟ್ರಕ್ ಚಾಲಕರು ದಿನಕ್ಕೆ ಇಂತಿಷ್ಟೇ ಸಮಯ ಚಾಲನೆ ಮಾಡಬೇಕು ಎಂಬ ನಿಯಮವಿದೆ. ಆದರೆ ನಮ್ಮಲ್ಲಿ ಇದು ಇಲ್ಲ. ಸರಕಾರ ಇದಕ್ಕೊಂದು ನಿಯಮ ರೂಪಿಸಬೇಕು ಎಂದು ಪ್ರತಿಪಾದಿಸಿದ ʼನ್ಯೂ ಇನಿಶಿಯೇಟಿವ್ಸ್ʼ ಕಂಪನಿ ಮುಖ್ಯಸ್ಥ ರಾಮ ಸುಬ್ರಮಣಿಯಂ, ಲಾಜಿಸ್ಟಿಕ್ ಕ್ಷೇತ್ರದ ಪರಿವರ್ತನೆಯಲ್ಲಿ ಜಿಎಸ್‌ಟಿ ಸುಧಾರಣೆ ಹಾಗೂ ಸ್ಕ್ರಾಪಿಂಗ್ ನೀತಿಯು ಮಹತ್ವದ ಪಾತ್ರ ವಹಿಸಲಿದೆ ಎಂದರು .
Key words: GIM Invest Karnataka, India, largest economy,freight sector, Martin Landstedt