ಬೆಂಗಳೂರು,ಫೆಬ್ರವರಿ,14,2025 (www.justkannada.in): ಕರ್ನಾಟಕ ಸರ್ಕಾರ ಘೋಷಿಸಿರುವ ಹೊಸ ಕೈಗಾರಿಕಾ ನೀತಿಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದ್ದು, 7.5 ಲಕ್ಷ ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು.
ರಾಜ್ಯ ಸರ್ಕಾರದ 30ಕ್ಕೂ ಮಿಗಿಲು ಇಲಾಖೆಗಳ ಮೂಲಕ 150ಕ್ಕೂ ಹೆಚ್ಚಿನ ವ್ಯಾಪಾರ ವೇದಿಕೆ ಸೃಷ್ಟಿಗೊಳ್ಳಲಿದ್ದು ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಏಕಕಿಂಡಿ ಗವಾಕ್ಷಿ ಸೇವೆಯನ್ನು ಪರಿಚಯಿಸಲಾಗುವುದು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು.
ನವೋದ್ಯಮಗಳ ಸ್ಥಾಪನೆಯಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿಯೇ ಅತ್ಯುನ್ನತ ಸ್ಥಾಯಿಯಲ್ಲಿದ್ದು, ಜೈವಿಕ ತಂತ್ತಜ್ಞಾನ, ನಾವೀನ್ಯತೆ, ಎಂಜನಿಯರಿಂಗ್, ಗೆಫೆಕ್ಸ್, ಹೆಲ್ತ್ ಕೇರ್ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕ ಮುಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕದಲ್ಲಿ ಎಲ್ಲಾ ಅನುಕೂಲತೆಗಳೂ ಇದ್ದು, ಉದ್ದಿಮೆಗಳ ಸ್ಥಾಪನೆಗೆ ರಾಜ್ಯ ಎಲ್ಲಾ ರೀತಿಯಲ್ಲಿ ಒತ್ತಾಸೆ ನೀಡುತ್ತದೆ, ನಮ್ಮಲ್ಲಿ ಸಂಪನ್ಮೂಲಗಳು ಮಾತ್ರವಲ್ಲದೆ, ಕೌಶಲ್ಯವೂ ಸೇರಿ ಹೂಡಿಕೆದಾರರಿಗೆ ಉತ್ತಮ ವಾತಾವರಣ ಕಲ್ಪಿಸುತ್ತದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಸಚಿವ ವಿ.ಸೋಮಣ್ಣ, ಕೇಂದ್ರದ ಮಾಜಿ ಸಚಿವ ಶಶಿ ತರೂರ್, ಸಚಿವರು, ಶಾಸಕರು ಪಾಲ್ಗೊಂಡಿದ್ದರು.
Key words: New Industrial Policy, 20 lakh, jobs, Minister, Priyank Kharge