ನಮಗೂ ಸೈಬರ್ ವಂಚನೆ ಕರೆಗಳು ಬರುತ್ತಿವೆ : ಮೈಸೂರು ಸೈಬರ್ ಕ್ರೈಂ ಮುಕ್ತ ಮಾಡಲು ಹೋರಾಟ- ಸಂಸದ ಯದುವೀರ್

ಮೈಸೂರು,ಫೆಬ್ರವರಿ,15,2025 (www.justkannada.in): ನಮಗೂ ಸಾಕಷ್ಟು ಸ್ಕ್ಯಾಮ್ ಕರೆಗಳು, ಒಟಿಪಿ‌ ಕೊಡಿ ಅಂತ ಕರೆಗಳು ಬರುತ್ತಲೇ ಇರುತ್ತವೆ. ನಾನು ಈವರೆಗೆ ಸೈಬರ್ ಕ್ರೈಂ ಜಾಲಕ್ಕೆ ಬಲಿಯಾಗಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಸೈಬರ್ ವರ್ಸ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ ಮಾತನಾಡಿದ ಸಂಸದ ಯದುವೀರ್, ನಮಗೂ ಕೂಡ ಸೈಬರ್ ವಂಚನೆ ಕರೆಗಳು ಬರುತ್ತವೆ. ಒಟಿಪಿ ಕೊಡಿ ಅಂತ ಕರೆಗಳು ಬರುತ್ತವೆ. ನಾನು ಅದನ್ನೆಲ್ಲ ಸ್ಕ್ಯಾಮ್ ಅಂತ ಬಿಟ್ಟು ಬಿಡುತ್ತೇನೆ. ಮನೆಯವರಿಗೂ‌ ಕೂಡ ಹಲವು ಬಾರಿ ಸೈಬರ್ ವಂಚನೆ ಕರೆಗಳು ಬರುತ್ತವೆ. ನಾವೂ ಕೂಡ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಗೆಳೆಯರು ಕೂಡ ಹಲವರು ಸೈಬರ್ ಕ್ರೈಂ‌ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಸೈಬರ್ ಕ್ರಿಮಿನಲ್‌ ಗಳು ತಂತ್ರಜ್ಞಾನದ ಮೂಲಕ ಅಪರಾಧ ಮಾಡುತ್ತಿದ್ದಾರೆ. ಸಣ್ಣ ಹಾಡಿಯಲ್ಲೂ‌ ಕೂಡ ಮೊಬೈಲ್ ಫೋನ್ ಸಿಗುತ್ತದೆ. ತಂತ್ರಜ್ಞಾನ ಬಳಸುವಾಗ ಅಪರಾಧ‌ ಹೆಚ್ವಾಗುತ್ತಿರುವುದು ಸಹಜ. ಕರ್ನಾಟಕದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಕಾರಣ ಜಾಗೃತಿ ಕಾರ್ಯ ಆರಂಭವಾಗಿದ್ದು. ಮೈಸೂರನ್ನ ಸೈಬರ್ ಕ್ರೈಂ ಮುಕ್ತ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ ಎಂದರು.

ಪೊಲೀಸರಿಗೆ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಬಂದಿದೆ

ಉದಯಗಿರಿ ಗಲಭೆ ಪ್ರಕರಣ ಕುರಿತು ಮಾತನಾಡಿದ ಸಂಸದ ಯದುವೀರ್, ಪೊಲೀಸರಿಗೆ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ಸರಕಾರ‌ ಕಠಿಣ ಕ್ರಮ‌ ಕೈಗೊಳ್ಳಬೇಕಾಗಿದೆ. ತಪ್ಪಿತಸ್ಥರಿಗೆ ಕಠಿಣ‌ಶಿಕ್ಷೆ ಆಗಲೇಬೇಕು. ನಾನು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದೆ. ಉದಯಗಿರಿಗೆ ನಾನು ಹೋಗುತ್ತೇನೆ. ಎಕ್ಸೆಲ್‌ ಫ್ಲಾಂಟ್ ಗೂ ಕೂಡ‌ ಹೋಗುತ್ತೇನೆ. ಯಾವಾಗಲೂ ಶಾಂತಿ ಕಾಪಾಡಬೇಕಾಗಿದೆ. ಕ್ರಿಮಿನಲ್‌ ಚಟುವಟಿಕೆ ನಡೆಯುವಾಗ ಕಠಿಣ‌ಕ್ರಮ‌ ಕೈಗೊಳ್ಳಬೇಕಾಗಿದೆ ಎಂದರು,

ಬಿಜೆಪಿಯಲ್ಲಿ‌ ಬಣ‌ಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್,  ಕಾಂಗ್ರೆಸ್ ಪಕ್ಷದಲ್ಲೂ ಕೂಡ ಬಣಗಳಿವೆ. ಕುರ್ಚಿಗಾಗಿ ಕಿತ್ತಾಟ ಎಲ್ಲರಲ್ಲೂ ಇದೆ. ನಮ್ಮ ಗೊಂದಲವನ್ನ ನಾವು ಪರಿಹರಿಸಿಕೊಳ್ಳುತ್ತೇವೆ. ನಾವು ಒಗ್ಗಟ್ಟಿನಿಂದ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು.

ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ‌ ನೋಟಿಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ವರಿಷ್ಠರಿಗೆ ಅವರು ಸ್ಪಷ್ಟನೆ ನೀಡಬೇಕು. ಅದನ್ನ ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

ವಿಜಯೇಂದ್ರ ಪರ‌ ಬ್ಯಾಟ್ ಬೀಸಿದ ಯದುವೀರ್

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪರ‌ ಬ್ಯಾಟ್ ಬೀಸಿದ ಯದುವೀರ್, ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿ. ಜವಾಬ್ದಾರಿಯಿಂದ ರಾಜ್ಯದಲ್ಲಿ ಮುನ್ನಡೆಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವು ಮುಂದುವರಿಯುತ್ತೇವೆ ಎಂದರು.

Key words: Cyber Crime,  fraud, calls,Mysore, MP Yaduveer