ಮುಡಾ ಕೇಸ್: ಲೋಕಾಯುಕ್ತ ವರದಿ ಸಮರ್ಥಿಸಿ ಬಿಜೆಪಿಗೆ ತಿರುಗೇಟು ಕೊಟ್ಟ ಸಚಿವ ಭೈರತಿ ಸುರೇಶ್

ಮೈಸೂರು,ಫೆಬ್ರವರಿ,21,2025 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಸಿಎಂ  ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟೀಕಿಸಿರುವ ಬಿಜೆಪಿ ನಾಯಕರಿಗೆ  ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

ಇಂದು ಮೈಸೂರು ಪ್ರವಾಸ ಕೈಗೊಂಡಿರುವ ಸಚಿವ ಭೈರತಿ ಸುರೇಶ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೋಜೆ ಸಲ್ಲಿಸಿ  ದರ್ಶನ ಪಡೆದಿದ್ದಾರೆ.  ತಾಯಿ, ಪತ್ನಿ, ಮಗಳು ಹಾಗೂ ಬೀಗ ಎಸ್ ಆರ್ ವಿಶ್ವನಾಥ್ ಸೇರಿದಂತೆ ಸಚಿವರ ಕುಟುಂಬ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದೆ.

ಬಳಿಕ ಮಾಧ್ಯಮಗಳ ಜೊತ ಮಾತನಾಡಿದ ಸಚಿವ ಭೈರತಿ ಸುರೇಶ್, ನಾನು ಅವತ್ತೇ ಹೇಳಿದ್ದೆ. ಬಿಜೆಪಿ ಜೆಡಿಎಸ್ ಅವರಿಗೆ ಮಾನ ಮರ್ಯಾದೆ ಇಲ್ಲ. ಚಾಮುಂಡಿ ತಾಯಿಯ ಮುಂದೆ ಪ್ರಮಾಣ ಮಾಡಿ ಅಂತ ಕರೆದಿದ್ದೆ. ಶ್ರೀವತ್ಸ ಸೇರಿ ಯಾರು ಬರಲಿಲ್ಲ. ಲೋಕಾಯುಕ್ತಕ್ಕಿಂತ ಬಲವಾದ ಸಂಸ್ಥೆ ಯಾವುದಿದೆ ? ಲೋಕಾಯುಕ್ತಕ್ಕೆ ಎಷ್ಟೋ ಕೇಸ್ ಗಳಲ್ಲಿ ಶಿಕ್ಷೆ ಕೊಡಿಸಿದ್ದಾರೆ. ಈಗ ಕೊಟ್ಟಿರುವ ವರದಿ ಕೂಡ ಸರಿಯಾಗಿದೆ ಎಂದು ಲೋಕಾಯುಕ್ತ ವರದಿ ಸಮರ್ಥಿಸಿಕೊಂಡರು.

ಎರಡು ಉದ್ದೇಶದಿಂದ ನಾನು ಮೈಸೂರಿಗೆ ಭೇಟಿ ನೀಡಿದ್ದೇನೆ. ಒಂದು ಚಾಮುಂಡಿ ತಾಯಿಯ ದರ್ಶನ ಮಾಡಿ ನಂಜನಗೂಡು ನಂಜುಂಡಸ್ವಾಮಿಯ ದರ್ಶನ ಮಾಡೋದು. ಇನ್ನೊಂದು ಮೈಸೂರು ಅಭಿವೃದ್ದಿ ಸಂಬಂಧ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಯುಜಿಡಿ ವರ್ಕ್ ಸಂಬಂಧ 750 ಕೋಟಿ ಹಣ ಬಿಡುಗಡೆ ಆಗಿದೆ. ಇಡೀ ಮೈಸೂರು ನಗರದಲ್ಲಿ 55ಕಿಲೋ ಮೀಟರ್ ವೈಟ್ ಟ್ಯಾಪಿಂಗ್ ಮಾಡೋಕೆ ಆದೇಶ ಮಾಡಿದ್ದೇನೆ. ನಾಳೆ ನಾಳಿದ್ದು ಅಷ್ಟರಲ್ಲಿ ಡಿಪಿಆರ್ ಆಗತ್ತೆ. ಇನ್ನು ಮಾರ್ಕೆಟ್ ಒಡೆದು ಹೊಸದಾಗಿ ಕಟ್ಟೋದು . ಇವೆಲ್ಲ ಇನ್ನೂ ಮೂರು ನಾಲ್ಕು ತಿಂಗಳಲ್ಲಿ ಕೆಲಸ ಶುರು ಆಗತ್ತೆ. ಬೆಂಗಳೂರಿನ ರೀತಿ ರಸ್ತೆ ಟ್ಯಾಪಿಂಗ್ ಮಾಡುತ್ತಿದ್ದೀವಿ. ಈ ಬಗ್ಗೆ ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದರು.

ಬೀಳುವ ಹಂತದಲ್ಲಿರುವ ಪಾರಂಪರಿಕ ಕಟ್ಟಡ ಗಳನ್ನೂ ಶೀಘ್ರವೇ ಒಡೆದು ಹಾಕಿ ಹೊಸ ಕಟ್ಟಡ ಕಟ್ಟುತ್ತೇವೆ. ಈಗ ಯಾರು ವ್ಯಾಪಾರ ಮಾಡಿದ್ದಾರೆ ಅವರಿಗೆ ಮತ್ತೆ ಮಳಿಗೆ ಕೊಡುತ್ತೇವೆ. ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ಫೈಲ್ ಗಳನ್ನು ಕೊಂಡೊಯ್ಯಲು ಅವೇನು‌ ಕಡ್ಲೆಪುರಿಯಲ್ಲ

ಮುಡಾ ಹಗರಣಕ್ಕೆ ಸಾಕ್ಷಿಯಾಗಿದ್ದ ಪ್ರಮುಖ‌ ಕಡತಗಳನ್ನು ಸಚಿವ ಭೈರತಿ ಸುರೇಶ್ ಕೊಂಡೊಯ್ದಿದ್ದಾರೆಂದು ಶಾಸಕ ಶ್ರೀವತ್ಸ ಆರೋಪ‌ ವಿಚಾರಕ್ಕೆ ತಿರುಗೇಟು ಕೊಟ್ಟ ಭೈರತಿ ಸುರೇಶ್, ನಾನು ಮುಡಾದಿಂದ ಯಾವುದೇ ಫೈಲ್ ಗಳನ್ನು ಕೊಂಡೊಯ್ದಿಲ್ಲ. ಫೈಲ್ ಗಳನ್ನು ಕೊಂಡೊಯ್ಯಲು ಅವೇನು‌ ಕಡ್ಲೆಪುರಿಯಲ್ಲ. ಸಿಸಿ ಕ್ಯಾಮರಾ ಕಣ್ತಪ್ಪಿಸಿ‌ ಏನನ್ನೂ ಕೊಂಡೊಯ್ಯಲು ಸಾಧ್ಯವಿಲ್ಲ. ಮುಡಾ ಪ್ರಕರಣದಲ್ಲಿ ‌ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಈ ಹಿಂದೆ ಕೂಡ ಹೇಳಿದ್ದೆ. ಈಗಲೂ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಚಾಮುಂಡಿ ಬೆಟ್ಟದಲ್ಲೇ ಹೇಳುತ್ತಿದ್ದೇನೆ ಎಂದರು.

Key words: Muda case,  Minister,  Bhairati Suresh,  defends, Lokayukta report