ಮೈಸೂರು ಫೆಬ್ರವರಿ, 21,2025 (www.justkannada.in): ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೇವಲ ಪೊಲೀಸ್ ಇಲಾಖೆ ಮತ್ತು ಮಕ್ಕಳ ರಕ್ಷಣಾ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿ ಸರ್ಕಾರಿ ಇಲಾಖೆಯ ಸಾಮೂಹಿಕ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಕುಮಾರ್ ಹೇಳಿದರು.
ನಗರದ ಕರಾಮುವಿವಿಯ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ನ್ಯೂಟ್ರಿಷಿಯನ್ ಸೊಸೈಟಿ ಆಫ್ ಇಂಡಿಯಾ, ಮೈಸೂರು ಚಾಪ್ಟರ್, ಆಹಾರ ಮತ್ತು ವಿಜ್ಞಾನ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ನಡೆದ ಶಿಕ್ಷಣ ಹಕ್ಕು ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ ಮತ್ತು ಭಿಕ್ಷಾಟನೆ ನಿರ್ಮೂಲನೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಕುರಿತ ಮೈಸೂರು ವಿಭಾಗೀಯ ಎಲ್ಲ ಜಿಲ್ಲೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿರುವ ಕಾನೂನು ಮಾನವೀಯ ಮೌಲ್ಯಗಳಿಂದ ಕೂಡಿದೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ಕಾನೂನುಗಳನ್ನು ಅನುಷ್ಠಾನ ಮಾಡುವವರು ಇಚ್ಛಾಶಕ್ತಿಯ ಮೇಲೆ ನಿಂತಿದೆ. ಬಾಲ್ಯ ವಿವಾಹ, ಭಿಕ್ಷಾಟನೆ, ಲೈಗಿಂಕ ದೌರ್ಜನ್ಯದಂತಹ ಘಟನೆಗಳು ನಡೆಯದಂತೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಅಧಿಕಾರಿಗಳು ಕೇವಲ ಒಂದು ದಿನ ಅಥವಾ ಕರೆ ಬಂದಾಗ ಮಾತ್ರ ಕಾರ್ಯಾಚರಣೆ ನಡೆಸಬಾರದು. ದಿನ ನಿತ್ಯ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಬೇಕು. ಪೊಲೀಸ್ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ ಮಾತ್ರ ಮಕ್ಕಳ ರಕ್ಷಣೆ ಜವಾಬ್ದಾರಿ ಎಂದುಕೊಳ್ಳಬಾರದು. ಮಕ್ಕಳ ರಕ್ಷಣೆ ಎಲ್ಲ ಇಲಾಖೆಗಳ ಸಾಮೂಹಿಕ ಕರ್ತವ್ಯ ಎಂದು ಹೇಳಿದರು.
ಯಾವುದೇ ಮಗುವಿನ ಮೇಲೆ ಶೋಷಣೆ, ದೌರ್ಜನ್ಯವಾದಾಗ ನಮಗೆ ಗೊತ್ತಿದ್ದೂ ಗೊತ್ತಿಲ್ಲದಂತಿರುವುದೂ ಕೂಡ ಅಪರಾಧ. ದೌರ್ಜನ್ಯ ಕಂಡ ಕೂಡಲೇ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಘಟನೆಯಾದ ವಿಚಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಅದರಲ್ಲಿಯೂ ಶಾಲಾ ಶಿಕ್ಷಕರು ಮಕ್ಕಳೊಂದಿಗೆ ಶಾಲೆಯಿಂದ ದೂರವಾಗೋದು, ಶಿಕ್ಷಣದಲ್ಲಿ ಕುಂಠಿತವಾದರೆ ಮಗುವಿನೊಂದಿಗೆ ಸಂವಾದ ಮಾಡಬೇಕು. ಆಪ್ತ ಸಮಾಲೋಚನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಮುಂದಿನ ದಿನಗಳಲ್ಲಿ ಸರ್ಕಾರ ಕೂಡ ಪ್ರತಿ ಶಾಲೆಯಲ್ಲಿ ಮಕ್ಕಳ ಆಪ್ತ ಸಮಾಲೋಚಕರನ್ನು ನಿಯೋಜಿಸಲಿದೆ. ಇಲ್ಲವಾದರೆ ಶಿಕ್ಷಕರಿಗೆ ತರಬೇತಿ ನೀಡಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಮಾನವನ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಮಾತನಾಡಿ, ಬಾಲ್ಯ ವಿವಾಹ ತಡೆಯಲು ಗ್ರಾಮ ಲೆಕ್ಕಿಗ, ಶಾಲಾ ಮುಖ್ಯಶಿಕ್ಷ ಕ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದರೂ, ಬಾಲ್ಯ ವಿವಾಹಗಳು ನಡೆಯುತ್ತಿವೆ. ಹೀಗಾಗಿ ಆಶಾ, ಅಂಗನವಾಡಿ ಕಾರ್ಯಕರ್ತರ, ಅಂಗನವಾಡಿ ಶಿಕ್ಷಕರ ತಂಡ ರಚಿಸಿ ತಳ ಮಟ್ಟದಲ್ಲಿ ಕೆಲಸ ಮಾಡಿ ಬಾಲ್ಯ ವಿವಾಹ, ಮಕ್ಕಳ ದೌರ್ಜನ್ಯ ಪ್ರಕರಣಗಳನ್ನು ತಡೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಅಂಕಗಳಿಸುವ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಮನೆಗಳಲ್ಲಿ ಮಕ್ಕಳೊಂದಿಗೆ ಪಾಲಕರು ಮಾತನಾಡುತ್ತಿಲ್ಲ. ಶಿಕ್ಷಕರು ಪಠ್ಯಕಷ್ಟೆ ಸೀಮಿತವಾಗಿದ್ದಾರೆ. ಹೀಗಾಗಿ ಮಕ್ಕಳು ಮೊಬೈಲ್ ಮತ್ತು ದೂರದರ್ಶನದ ಹೆಚ್ಚು ವೀಕ್ಷಣೆ ಮಾಡುವುದು ದುಸ್ಥಿತಿ ತಲುಪಿದ್ದು, ಇದರಿಂದ ಹೊರ ತರುವುದು ಸವಾಲು ಎದುರಾಗಿದೆ. ಮೊಬೈಲ್ ಬಳಕೆ ಹತೊಟಿಗೆ ತಜ್ಞರ ಸಲಹೆಗಳನ್ನು ಕೇಳಲಾಗುತ್ತಿದೆ ಎಂದು ಹೇಳಿದರು.
ಮೊಬೈಲ್ ಬಳಕೆಯಲ್ಲಿ ಮುಳುಗಿರುವ ಮಕ್ಕಳಿಂದ ಪಾಲಕರು ಮೊಬೈಲ್ ಕಸಿದುಕೊಂಡರೆ ಮಗು ಶಾಲೆ ಬಿಡುವುದು, ಮನೆಯಿಂದ ತಪ್ಪಿಸಿಕೊಳ್ಳುವುದು ಅಥವಾ ಪ್ರಾಣ ಕಳೆದುಕೊಳ್ಳುವ ಹಂತಕ್ಕೂ ತಲುಪುತ್ತಿದ್ದಾರೆ. ಕೊರೊನಾದ ನಂತರ ಆನ್ ಲೈನ್ ತರಗತಿಗಳ ಪ್ರಭಾವದಿಂದ ಮೊಬೈಲ್ ಬಳಕೆ ಹೆಚ್ಚಾಗಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಕಾರ್ಯನಿರ್ವಹಿಸುವಂತೆ ಉಳಿದ ಸಮಯದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಅಧಿಕಾರಿಗಳ ಎಲ್ಲ ಸಮಯದಲ್ಲಿಯೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳಿಗೆ ತಾಲ್ಲೂಕಿನಲ್ಲಿ ಸಭೆ ನಡೆಸಬೇಕು. ಶಾಲೆಯಿಂದ ದೂರ ಉಳಿದ ಮಕ್ಕಳ ಮನೆಗೆ ತೆರಳಿ ಕರೆ ತರುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಇದು ‘ಪಾಪ’ದ ಕೃತ್ಯವಾಗಲಿದೆ ಎಂದು ಹೇಳಿದರು.
ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ವಾತನಾಡಿ, ಸಾರ್ವಜನಿಕರಲ್ಲಿ ನನ್ನಂತೆ ಸಮಾಜ ಎಂಬ ಪರಿಕಲ್ಪನೆ ಬರದಿದ್ದರೇ ಸುಧಾರಣೆ ಕಷ್ಟ. ಪ್ರಸ್ತುತ ಮಕ್ಕಳ ಭಾವನೆಗಳನ್ನು ಪೋಷಕರು ನಿರ್ಲಕ್ಷಿಸುತ್ತಿದ್ದಾರೆ. ಮಕ್ಕಳ ಭಾವನೆಗೆ ಸ್ಪಂದಿಸಿದಾಗ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಆಗುತ್ತದೆ. ಹೀಗಾಗಿ, ಪೋಷಕರು ಮಕ್ಕಳೊಂದಿಗೆ ಬೆರೆಯಬೇಕು. ಮಕ್ಕಳ ಹಕ್ಕುಗಳು, ಮಾನವ ಹಕ್ಕುಗಳು ರಕ್ಷಿಸಿದರೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಮಾತನಾಡಿ, ಮಕ್ಕಳಿಗೆ ಸಂಬಂಧಿಸಿದಂತ ಕಾನೂನುಗಳನ್ನು ಅನುಷ್ಠಾನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹೆತ್ತವರು, ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಮಕ್ಕಳ ಮೇಲೆ ಪೋಷಕರು ನಿಗಾ ವಹಿಸಬೇಕು. ಶಿಕ್ಷಕರು ಮಕ್ಕಳ ಮೇಲೆ ಕಣ್ಣು ಇರಿಸಬೇಕು. ನಂತರ ಮಕ್ಕಳ ಮೇಲಿನ ದೌರ್ಜನ್ಯಗಳು ನಡೆದಾಗ ಕಾನೂನು ಚೌಕಟ್ಟಿನಲ್ಲಿ ಕ್ರಮ ವಹಿಸಲು ವಿವಿಧ ಇಲಾಖೆಗಳಿವೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಸವಿತಾ, ಡಿಸಿಪಿ ಎಸ್. ಜಾಹ್ನವಿ, ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಸ್. ಮಂಜು, ವೆಂಕಟೇಶ್, ಅಪರ್ಣಾ ಎಂ. ಕೊಳ್ಳಾ, ನ್ಯೂಟ್ರಿಷಿಯನ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಚಾಪ್ಟರ್ ಅಧ್ಯಕ್ಷೆ ಡಾ.ಸಿ. ಅನಿತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್.ಟಿ ಯೋಗೇಶ್ ಮೊದಲಾದವರು ಇದ್ದರು.
Key words: Child protection, duty , all departments , B.G. Dinesh Kumar