ಅತ್ಯಾಚಾರ ಯತ್ನ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ದಂಡ ವಿಧಿಸಿದ ಕೋರ್ಟ್

ಚಾಮರಾಜನಗರ,ಫೆಬ್ರವರಿ,22,2025 (www.justkannada.in) : ಮಹಿಳೆ ಮೇಲೆ ಅತ್ಯಾಚಾರ, ಕೊಲೆಗೆ ಯತ್ನಿಸಿದ ಆರೋಪದ ಮೇಲೆ  ಅಪರಾಧಿಗೆ 4 ವರ್ಷಗಳ ಕಾಲ ಸೆರೆವಾಸ ಮತ್ತು  5,000 ರೂ.ದಂಡ ವಿಧಿಸಿ ಕೊಳ್ಳೇಗಾಲದ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು  ತಾಲ್ಲೂಕು ಸಿದ್ದಲಿಂಗಪುರ ಗ್ರಾಮದ ಕಾರ್ತಿಕ್ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ. ಕೊಳ್ಳೇಗಾಲದ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ  ಟಿ.ಸಿ ಶ್ರೀಕಾಂತ್  ಅವರು ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ್ದಾರೆ.

 ಘಟನೆ ಹಿನ್ನೆಲೆ.

ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿ  ಕಾರ್ತಿಕ್ 26/10/2019ರಂದು ಸಂಜೆ 6-30ರ ಗಂಟೆ ಸಮಯದಲ್ಲಿ ಕೊಳ್ಳೇಗಾಲ ಪಟ್ಟಣದ ಅಸ್ಸಿಸ್ಸಿ ಚಾರ್ಚ ಬಳಿ ಜೆ.ಎಸ್.ಎಸ್. ಕಾಲೇಜ್ ಸೇತುವೆ ಬಳಿ ಚಾಸಾ.1ರವರು( ಜಯಲಕ್ಷ್ಮಿ) ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸೇತುವೆ ಕೆಳಕ್ಕೆ ಕೆರೆಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದನು.

ಪ್ರಕರಣ ಸಂಬಂಧ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿ ತನಿಖಾಧಿಕಾರಿ ಕೊಳ್ಳೇಗಾಲ ಪೊಲೀಸ್ ಠಾಣೆಯ ಪಿಎಸ್ ಐ  ಜೆ. ರಾಜೇಂದ್ರ ಅವರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.

ಅದು ಎಸ್.ಸಿ ನಂ.5052/2022 ರಂತೆ ದಾಖಲಾಗಿದ್ದು, ಅದರಂತೆ ವಿಚಾರಣೆ ನಡೆಸಿ, ನ್ಯಾಯಾಲಯವು ಈ ಪ್ರಕರಣದಲ್ಲಿ ಆರೋಪಿ ಕಾರ್ತಿಕ್ ಗೆ  ಐಪಿಸಿ ಕಾಯ್ದೆ ಕಲಂ 354(ಎ) 307 ರಡಿ ಶಿಕ್ಷೆ ವಿಧಿಸಿದ್ದು, ಆರೋಪಿಗೆ 4 ವರ್ಷಗಳ ಕಾಲ ಸೆರೆವಾಸ ಮತ್ತು ರೂ.5,000 ದಂಡ ವಿಧಿಸಿ ಆದೇಶಿಸಿದೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಅವರು ವಿಚಾರಣೆ ನಡೆಸಿ, ವಾದ ಮಂಡಿಸಿದರು.

Key words: Attempted, rape case, Court, sentences, accused, jail