ಮೈಸೂರು,ಫೆಬ್ರವರಿ,25,2025 (www.justkannada.in): ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನು JDS ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ತಳಮಟ್ಟದಿಂದ ಪಕ್ಷವನ್ನ ಕಾರ್ಯಕರ್ತರು ಕಟ್ಟಿ ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ರಾಜ್ಯ ಸರ್ಕಾರದ ವೈಫಲ್ಯದಿಂದ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಎಲ್ಲಾ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವುದು ನಮ್ಮ ಗುರಿ. ರಾಜ್ಯದಲ್ಲಿ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಮೊದಲು ಎಲ್ಲಾ ರೀತಿಯ ಸಂಘಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ತಂದೆ, ತಾತ ಅವರ ಅನಾರೋಗ್ಯ ಹಿನ್ನೆಲೆ ಒತ್ತಡ ಬರುತ್ತಿದೆ. ಆದರೆ, ಪಕ್ಷದಲ್ಲಿ ಹಲವು ಹಿರಿಯ ನಾಯಕರು ಇದ್ದಾರೆ. ಸದ್ಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ಎಂಬುದು ಅಪ್ರಸ್ತುತ ಎನಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ನಾಯಕರು ಲೋಕಸಭೆಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ ರಾಹುಲ್ ಗಾಂಧಿ ಗುರುಗಳಾದ ಸ್ಯಾಮ್ ಪಿತ್ರೋಡ ಹಗರಣ ಬೆಳಕಿಗೆ ಬಂದಿದೆ. ಈ ಕುರಿತು ಸಚಿವ ಈಶ್ವರ್ ಖಂಡ್ರೆ ಏನ್ ಮಾಡ್ತಾರೆ ? ಕಾಂಗ್ರೆಸ್ ಪಕ್ಷ ಏನು ಮಾಡಲಿದೆ ಕಾದು ನೋಡಬೇಕಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಪರಮೇಶ್ವರ್ ಅವರು ಅಸಹಾಯಕರಾಗಿ ಹೇಳಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಯುವಕನ ಗಡಿಪಾರಿಗೆ ಚಿಂತನೆ ಮಾಡುತ್ತಿದ್ದಾರೆ. ಅಂತಹ ಗಡಿಪಾರು ಮಾಡುವುದಾದರೆ ನಮ್ಮ ಪಕ್ಷದ ಪೇಜ್ ಅಲ್ಲೂ ಹಲವು ಪೋಸ್ಟ್ ಹಾಕುತ್ತಾರೆ. ನಿತ್ಯವೂ ಪಕ್ಷದ ವಿರುದ್ಧ ಕ್ರಮ ಆಗುತ್ತೆ. ಉದಯಗಿರಿ ಪ್ರಕರಣ ಪೂರ್ವನಿಯೋಜಿತ ಕೃತ್ಯ ಎಂದು ನಿಖಿಲ್ ಆರೋಪಿಸಿದರು.
ಮುಡಾ ಹಗರಣ ಸಂಬಂಧ, ಲೋಕಾಯುಕ್ತ ತರಾತುರಿಯಲ್ಲಿ ಬಿ ರಿಪೋರ್ಟ್ ಹಾಕಿದೆ. ಅಂದಿನ ಜಿಲ್ಲಾಧಿಕಾರಿ, ಇಂದಿನ ರಾಯಚೂರು ಎಂಪಿ ಕುಮಾರ್ ನಾಯ್ಕ್ ನಿರ್ಲಕ್ಷ್ಯ ಎಂದು ಹೇಳುತ್ತಿದೆ. ಅಧಿಕಾರಿಗಳ ಮೇಲೆ ಲೋಕಾಯುಕ್ತ ಗೂಬೆ ಕೂರಿಸುತ್ತಿದೆ. ಸ್ಥಳ ಪರಿಶೀಲನೆ ನಡೆಸದೆ ಲೋಪವೆಸಗಲು ಅದರ ಹಿಂದಿರುವ ವ್ಯಕ್ತಿಗಳು ಕಾರಣ ಅಲ್ಲವೇ? ಆ ಪ್ರಭಾವ ಬೀರಿರುವ ವ್ಯಕ್ತಿಗಳು ಯಾರು? ಆ ರಾಜಕಾರಣಿಗಳು ಯಾರು? ಎಂದು ನಿಖಿಲ್ ಕಿಡಿಕಾರಿದರು.
ಹಾಗೆಯೇ ನಮ್ಮ ಬಿಡದಿಯ ತೋಟದ ಮನೆ ವಿಚಾರ ಹಲವು ಬಾರಿ ಚರ್ಚೆಗೆ ಕಾರಣವಾಗಿದೆ. 2013 ರಿಂದ ನಿರಂತರ ತನಿಖೆ ಮಾಡಿದ್ದಾರ. 1985 ರಲ್ಲಿ ಕುಮಾರಸ್ವಾಮಿ ಅವರು ಖರೀದಿಸಿದ ಭೂಮಿ. ಎಚ್ ಡಿಕೆ ಇಂತಹ ಭೂಮಿ ಬೇಕೆಂದು ಎಂದೂ ಹೇಳಿದವರಲ್ಲ. ಬಿಡದಿಯಲ್ಲಿ ಯಾವುದೇ ಬೃಹತ್ ಬಿಲ್ಡಿಂಗ್ ಕಟ್ಟಿ ವ್ಯವಹಾರ ಮಾಡುತ್ತಿಲ್ಲ. ಕಾನೂನು ತನಿಖೆ ಎದುರಿಸಲು ನಾವು ಸಿದ್ಧ. ಎಲ್ಲದ್ದಕ್ಕೂ ದೇವರಿದ್ದಾನೆ, ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
Key words not aspirant, JDS, state president, Nikhil Kumaraswamy