ಮೈಸೂರು,ಫೆಬ್ರವರಿ,25,2025 (www.justkannada.in): ದೆವ್ವ ಬಿಡಿಸುವ ನೆಪದಲ್ಲಿ ಅವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಹುಣಸೂರು ಪಟ್ಟಣ ಲಾಲ್ ಬಂದ್ ಸ್ಟ್ರೀಟ್ ನಿವಾಸಿ ಜಬೀವುಲ್ಲಾ ಬಿನ್ ಅತಾವುಲ್ಲಾ (26) ಜೈಲುಶಿಕ್ಷೆಗೆ ಗುರಿಯಾದ ಆರೋಪಿ.
ಘಟನೆ ಹಿನ್ನೆಲೆ
ಸಂತ್ರಸ್ತೆಗೆ 33 ವರ್ಷಗಳಾದರೂ ಮದುವೆಯಾಗದ ಹಿನ್ನೆಲೆಯಲ್ಲಿ ಆರೋಪಿ ಜಬೀವುಲ್ಲಾ ಬಿನ್ ಅತಾವುಲ್ಲಾ ಬಳಿ ಕುಟುಂಬಸ್ಥರು ಆಕೆಯನ್ನ ಕರೆದೊಯ್ದಿದ್ದರು. ಈ ಮಧ್ಯೆ ತಾನು ಧರ್ಮಗುರು ಎಂದು ಹೇಳಿಕೊಂಡಿದ್ದ ಆರೋಪಿ ಜಬೀವುಲ್ಲಾ ಸಂತ್ರಸ್ತೆಗೆ ದೆವ್ವ ಹಿಡಿದಿದೆ ಪೂಜೆ ಮಾಡಿ ದೆವ್ವ ಬಿಡಿಸಿದರೆ ಮದುವೆಯಾಗುತ್ತದೆ ಎಂದು ತಿಳಿಸಿದ್ದನು. ಅಂತೆಯೇ 01-06-2020 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಸಂತ್ರಸ್ತೆಯ ಮನೆಯಲ್ಲಿ ಪೂಜೆ ಮಾಡಿದ್ದು, ಮೊಟ್ಟೆ, ನಿಂಬೆಹಣ್ಣನ್ನು ಬೋಲೆಬಾಲೆ ಹಜರತ್ ಶಾ ಖಾದ್ರಿ ಅಂಬ್ರಿಗೋರಿಯ ಬಳಿ ಒಡೆಯಬೇಕೆಂದು ಹೇಳಿ ಪಿರಿಯಾಪಟ್ಟಣದ ಬೋಲೆಬಾಲೆ ಗೋರಿಯ ಬಳಿ ಸಂತ್ರಸ್ತೆ ಮತ್ತು ಆಕೆಯ ಸಂಬಂಧಿ ಸಾದಿಕ್ ಪಾಷ ಅವರನ್ನು ಕರೆದುಕೊಂಡು ಹೋಗಿದ್ದನು.
ಈ ಮಧ್ಯೆ ಆರೋಪಿಯು ಸಾದಿಕ್ ಪಾಷ ಅವರಿಗೆ ಪಿರಿಯಾಪಟ್ಟಣ ಟೌನ್ ಗೆ ಹೋಗಿ ಬೆಂಕಿಪೊಟ್ಟಣ ತರುವಂತೆ ಕಳುಹಿಸಿ ನಂತರ ಅಂದು ಮಧ್ಯಾಹ್ನದ ವೇಳೆ ಸಂತ್ರಸ್ತೆಯು ಒಬ್ಬಳೇ ಇದ್ದಾಗ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಅತ್ಯಾಚಾರ ಮಾಡಿದ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಸಾಕ್ಷ್ಯಾಧಾರಗಳಿಂದ ಆರೋಪ ದೃಢಪಟ್ಟ ಮೇರೆಗೆ ಆರೋಪಿ ವಿರುದ್ಧ ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್.ಪ್ರದೀಪ್ ರವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದು, ನ್ಯಾಯಾಧೀಶ ಎಂ.ರಮೇಶ ಅವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಮತ್ತು ದಾಖಲಾತಿಗಳನ್ನು ಪರಿಗಣಿಸಿ ಪ್ರಕರಣದಲ್ಲಿ ಆರೋಪಿ ಕಲಂ 376, 506 ಐಪಿಸಿ ರೀತ್ಯಾ ಅಪರಾಧ ಎಸಗಿರುವುದು ರುಜುವಾತಾಗಿರುವುದಾಗಿ ತೀರ್ಮಾನಿಸಿ ಇಂದು ಆರೋಪಿಗೆ ಕಲಂ 376 ಐಪಿಸಿ ಅಡಿಯ ಅಪರಾಧಕ್ಕೆ 10 ವರ್ಷಗಳ ಕಠಿಣ ಸಜೆ ಮತ್ತು ರೂ.30,000/- ದಂಡ ವಿಧಿಸಿದ್ದು, ಕಲಂ 506 ಐಪಿಸಿ ಅಡಿಯ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು ರೂ.5,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಕೆ.ನಾಗರಾಜ ಅವರು ಸರ್ಕಾರದ ಪರ ವಾದ ಮಂಡಿಸಿದರು.
Key words: Rape case, Accused, 10 years, rigorous imprisonment, mysore, court