ಪಿಜಿ ವೈದ್ಯರ ಮೇಲೆ ಹಲ್ಲೆ: ಆಹೋರಾತ್ರಿ ಧರಣಿ ನಡೆಸಿದ ಡಾಕ್ಟರ್ಸ್.

ಹಾಸನ,ಫೆಬ್ರವರಿ,25,2025 (www.justkannada.in):  ನಗರದ ಹಿಮ್ಸ್ ಆಸ್ಪತ್ರೆಯ ಕರ್ತವ್ಯ ನಿರತ ಸ್ನಾತಕೋತ್ತರ  ವೈದ್ಯರ ಮೇಲೆ ರೋಗಿಯ ಕಡೆಯವರು ಹಲ್ಲೆ ಮಾಡಿದ್ದನ್ನು ಖಂಡಿಸಿ ರಾತ್ರೋರಾತ್ರಿ ನೂರಾರು ವಿದ್ಯಾರ್ಥಿಗಳು ಕರ್ತವ್ಯ ಬಹಿಷ್ಕರಿಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ವೈದ್ಯರು, ಇತರೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸಾಥ್ ನೀಡಿದರು. ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದರು.  ರೋಗಿ ಜೊತೆ ಮೂವರು ಜೊತೆಗೆ ಬಂದಿದ್ದರು. ಈ ವೇಳೆ ಕರ್ತವ್ಯ ನಿರತ ವೈದ್ಯರು ಬೇರೆ ರೋಗಿಗೆ ಚಿಕಿತ್ಸೆ ನೀಡುತ್ತಿದ್ದು,  ಆದರೂ ನಮ್ಮ ಕಡೆಯವರಿಗೆ ಬೇಗ ಚಿಕಿತ್ಸೆ ನೀಡಿ ಎಂದು ಗಾಯಾಳು ಸಂಬಂಧಿಕರು ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ.

ವೈದ್ಯರನ್ನು ಎಳೆದುಕೊಂಡು ಹೋಗಿ ಮೊದಲು ನಮ್ಮವರಿಗೆ ಚಿಕಿತ್ಸೆ ಕೊಡಿ ಎಂದು ಅವಾಜ್ ಹಾಕಿದ್ದಾರೆ. ಸ್ವಲ್ಪ ನಿಧಾನಿಸಿ ಎಂದರೂ ಕೇಳದೆ ಹಲ್ಲೆ ಮಾಡಿದ್ದು, ಓರ್ವ ವೈದ್ಯರ ಮುಖದಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ ಮಾಹಿತಿ ನೀಡಿದರು.

ಇನ್ನು ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ಎಂಬ ಸರ್ಕಾರಿ ಆದೇಶ ಇದ್ದರೂ, ಈ ರೀತಿಯ ಘಟನೆಗಳು ಆಗಾಗ ಮರುಕಳಿಸುತ್ತಲೇ ಇವೆ. ಹೀಗಾಗಿ ತಪ್ಪು ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕೂಡಲೇ ಅವರನ್ನು ಬಂಧಿಸಬೇಕು ಎಂದು  ಪ್ರತಿಭಟನಾನಿರತರು  ಆಗ್ರಹಿಸಿದರು.

ಹಲ್ಲೆ ಮಾಡಿದ್ದ ಮೂವರು ವಶಕ್ಕೆ

ಕರ್ತವ್ಯ ನಿರತ ಸರ್ಕಾರಿ ವೈದ್ಯರ ಮೇಲೆ ಹಲ್ಲೆ ಸಂಬಂಧ ಹಿಮ್ಸ್ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಎಫ್‌ ಐಆರ್ ದಾಖಲಿಸಿ ಕಳೆದ ರಾತ್ರಿಯೇ ನಗರ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ಪ್ರಸಾದ್ ಮೊದಲಾದವರು ಘಟನೆ ಖಂಡಿಸಿ ಹಾಗೂ ಸೂಕ್ತ ರಕ್ಷಣೆಗೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಇಂದು ಮನವಿ ಸಲ್ಲಿಸಿದರು.

Key words: Attack,  PG, doctor, Protest, Hassan