ಮಾ.8 ರಂದು ರಾಷ್ಟ್ರೀಯ ಲೋಕ-ಅದಾಲತ್

ಮಂಡ್ಯ,ಫೆಬ್ರವರಿ,25,2025 (www.justkannada.in): ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜ್ಯಾದ್ಯಂತ ಮಾರ್ಚ್ 08 ರಂದು ರಾಷ್ಟ್ರೀಯ ಲೋಕ-ಅದಾಲತ್‌ ಅನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬರುವಂತಹ 7 ತಾಲ್ಲೂಕುಗಳಲ್ಲಿಯೂ ಸಹ ಲೋಕ್-ಅದಾಲತ್ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಪೂರ್ವಭಾವಿ ಬೈಠೆಕ್‌ ಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾದೀಶ ಆನಂದ್ ಎಂ  ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ-ಅದಾಲತ್‌ನಲ್ಲಿ ಆಸ್ತಿ ವಿವಾದಗಳನ್ನು ಒಳಗೊಂಡಂತೆ ಸಿವಿಲ್ ವ್ಯಾಜ್ಯಗಳು, ವಿಭಾಗ ದಾವೆಗಳು, ಹಣ ವಸೂಲಾತಿ ದಾವೆಗಳು, ನಿರ್ದಿಷ್ಟ ಪರಿಹಾರ ಕಾಯ್ದೆ ಅಡಿ ದಾಖಲಿಸಿರುವ ದಾವೆಗಳು (ಎಂವಿಸಿ) ಮೋಟಾರ್ ವಾಹನಗಳ ಪ್ರಕರಣಗಳು, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣಗಳು, ರಾಜಿ ಆಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳು ಮತ್ತು ಚೆಕ್ ಬೌನ್ಸ್ ಪ್ರಕರಣಗಳು ಎಲ್ಲವನ್ನು ರಾಜಿಗೆ ತೆಗೆದುಕೊಂಡು ಆಯಾ ನ್ಯಾಯಲಯಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಲೋಕ-ಅದಾಲತ್ ನ್ಯಾಯಾಲಯಗಳಲ್ಲಿ ಬಾಕಿ ಇರುವಂತಹ ಪ್ರಕರಣಗಳ ಜೊತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ, ವ್ಯಾಜ್ಯ ಪೂರ್ವ ಪ್ರಕರಣಗಳು (ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕ ವಿವಾದ ಪ್ರಕರಣಗಳು) ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಾರರಿಗೆ ನೋಟಿಸ್ ನೀಡಿ ಕರೆಸಿ ಪ್ರಾಧಿಕಾರದ ವತಿಯಿಂದ ಪೂರ್ವಭಾವಿ ಬೈಠಕ್ ನಡೆಸಿ ಅದಾಲತ್‌ ನಲ್ಲಿ ರಾಜಿ ಸಂಧಾನದ ಮೂಲಕ ಲೋಕ್‌ ಅದಾಲತ್‌ ನಲ್ಲಿ ಇತ್ಯರ್ಥಪಡಿಸಿ ಕೊಳ್ಳಬಹುದಾಗಿದೆ. ಇಂತಹ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ವಕೀಲರ ಮುಖಾಂತರ ಅಥವಾ ತಾವೇ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದರು.

ಜನಸಾಮಾನ್ಯರು ಹಾಗೂ ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಂಡು ಲೋಕ-ಅದಾಲತ್‌ ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಲೋಕ-ಅದಾಲತ್‌ ನ್ನು ಯಶಸ್ವಿಗೊಳಿಸಿಕೊಳ್ಳುವಂತೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆನಂದ್ ಎಂ ಪ್ರಕಟಣೆಯಲ್ಲಿ ಕೋರಿದ್ದಾರೆ.

Key words: National Lok Adalat,March 8, Mandya