ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ 1.20 ಲಕ್ಷ ರೂ. ದಂಡ: ಹೈಕೋರ್ಟ್ ತಡೆ

ಬೆಂಗಳೂರು,ಫೆಬ್ರವರಿ,26,2025 (www.justkannada.in): ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿದ್ದ ಹಾಗೂ ಪ್ರಸ್ತುತ  ಕನ್ನಡ ಸಾಹಿತ್ಯ ಪರಿಷತ್‌ ನ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಅವರಿಗೆ ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯವು12 ವರ್ಷ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 1.20 ಲಕ್ಷ ದಂಡ ವಿಧಿಸಿದೆ. ಹಾಗೆಯೇ ದಂಡದ ಮೊತ್ತವನ್ನು ವಾರ್ಷಿಕ ಶೇ 24ರಷ್ಟು ಬಡ್ಡಿ ಸಮೇತ ದೂರುದಾರರಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಮಹೇಶ್ ಜೋಶಿ ಅವರು 1984ರಲ್ಲಿ ದೂರದರ್ಶನ ನಿರ್ದೇಶಕರಾಗಿದ್ದಾಗ ಮೋಹನ್ ರಾಂ ಸೇರಿ ಏಳು ಸಹೋದ್ಯೋಗಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಆ ಪ್ರಕರಣ ಸುಳ್ಳು ಎಂದು 2013ರಲ್ಲಿ ಹೈಕೋರ್ಟ್‌ ತೀರ್ಪು ನೀಡಿ, ಪ್ರಕರಣವನ್ನು ವಜಾಗೊಳಿಸಿತ್ತು.

ಹೈಕೋರ್ಟ್ ತೀರ್ಪಿನ  ಬಳಿಕ ಮೋಹನ್ ರಾಂ ಅವರು, ತಮಗಾಗಿದ್ದ ಮಾನಸಿಕ ಹಿಂಸೆ ಮತ್ತು ಆರ್ಥಿಕ ನಷ್ಟ ಸೇರಿ ₹1.20 ಪರಿಹಾರ ಕೋರಿ ನಗರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ 14ನೇ ಸಿವಿಲ್ ನ್ಯಾಯಾಲಯವು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ 1.20 ಲಕ್ಷ ರೂ. ದಂಡ ವಿಧಿಸಿ ಫೆ.19ರ ಬುಧವಾರ ತೀರ್ಪು ನೀಡಿದೆ.

‘ದಂಡವನ್ನು ಪರಿಹಾರವಾಗಿ ಪಾವತಿ ಮಾಡುವುದರ ಜತೆಗೆ ಸುಳ್ಳು ಪ್ರಕರಣದ ಸಂಬಂಧ ದೂರದರ್ಶನದಲ್ಲಿ ಹಾಗೂ ರಾಜ್ಯದ ಪ್ರಮುಖ ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಯಲ್ಲಿ ಕ್ಷಮೆ ಕೋರಬೇಕು. ತೀರ್ಪು ಬಂದ ಏಳು ದಿನಗಳಲ್ಲಿ ಇವನ್ನು ಮಾಡಬೇಕು’ ಎಂದು ನ್ಯಾಯಾಧೀಶರಾದ ಎ.ಎಂ.ನಳಿನಿ ಕುಮಾರಿ ಅವರು ಆದೇಶಿಸಿದ್ದಾರೆ.

‘ಸೂಚಿತ ಅವಧಿಯಲ್ಲಿ ಪರಿಹಾರದ ಹಣ ಪಾವತಿಸದೇ ಇದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಮತ್ತು ಏಳು ದಿನ ಜೈಲು ಶಿಕ್ಷೆ ವಿಧಿಸಲಾಗುವುದು’ ಎಂದು ಆದೇಶಿಸಿದ್ದಾರೆ.

ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಇನ್ನು ದಂಡ ವಿಧಿಸಿ ವಿಚಾರಣಾ ನ್ಯಾಯಾಲಯವು ನೀಡಿರುವ  ತೀರ್ಪನ್ನು ಪ್ರಶ್ನಿಸಿ ಮಹೇಶ್ ಜೋಶಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು  ಮುಂದಿನ ವಿಚಾರಣೆವರೆಗೆ (ಮಾರ್ಚ್ 6) ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ. ಈ ಮಧ್ಯೆ  ಅದಕ್ಕೂ ಮುನ್ನ  1.50 ಲಕ್ಷವನ್ನು ಠೇವಣಿಯಾಗಿ ನ್ಯಾಯಾಲಯದಲ್ಲಿ ಇರಿಸುವಂತೆ  ಮಹೇಶ್ ಜೋಶಿ ಅವರಿಗೆ ಆದೇಶಿಸಿದೆ.

Key words: Mahesh Joshi, fined, Rs 1.20 lakh, High Court, stays order