ಕರ್ನಾಟಕ ‌–ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಆರಂಭ

ಬೆಳಗಾವಿ, ಫೆಬ್ರವರಿ, 27, 2025 (www.justkannada.in): ಕಂಡಕ್ಟರ್ ಮೇಲೆ ಹಲ್ಲೆ, ಕನ್ನಡ ಮರಾಠಿ ಭಾಷಾ ಗಲಾಟೆಯಿಂದ ಬಂದ್ ಆಗಿದ್ದ ಕರ್ನಾಟಕ ‌–ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಇಂದಿನಿಂದ ಪುನಾರಂಭಗೊಂಡಿದೆ.

ನಾಲ್ಕು ದಿನಗಳ ಬಳಿಕ ಇಂದಿನಿಂದ ಅಂತರರಾಜ್ಯಗಳ‌ ಮಧ್ಯೆ ‌ಬಸ್ ಸಂಚಾರ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ  ಕಾರ್ಯಕರ್ತರು ಕರ್ನಾಟಕ ಬಸ್ ಗೆ ಮಸಿ ಬಳಿದು ಗೂಂಡಾಗಿರಿ ಪ್ರದರ್ಶಿಸಿದ್ದರು.  ಇಷ್ಟಕ್ಕೆ ಸುಮ್ಮನಾಗದೇ ಕರ್ನಾಟಕ ಬಸ್ ಚಾಲಕನಿಂದ ಜೈ ಮಹಾರಾಷ್ಟ್ರ ಘೋಷಣೆ ಹಾಕಿಸಿದ್ದರು.  ಇದಕ್ಕೆ ಬೆಳಗಾವಿ ಚಲೋ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಿವಸೇನೆ ಕಾರ್ಯಕರ್ತರಿಗೆ ತಕ್ಕ ಉತ್ತರ ಕೊಟ್ಟಿದ್ದರು.

ಈ ಮಧ್ಯೆ ಫೆಬ್ರವರಿ 23 ರಿಂದ ಎರಡು ರಾಜ್ಯಗಳ ನಡುವೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನಾಲ್ಕು ದಿನ ಬಸ್ ಇಲ್ಲದಕ್ಕೆ ಎರಡು ರಾಜ್ಯದಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದರು. ಅಲ್ಲದೆ  ನಾಲ್ಕು ದಿನದಲ್ಲಿ ಕರ್ನಾಟಕ ಸರ್ಕಾರ ಕೋಟ್ಯಾಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸಿದೆ.

ಈ ನಡುವೆ ಬೆಳಗಾವಿ ಡಿಸಿ ಮತ್ತು ಕೊಲ್ಲಾಪುರ ಡಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಸ್ ಆರಂಭಿಸಲು ಮಾತುಕತೆ ನಡೆಸಿ ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯದಲ್ಲಿ ಬಸ್ ಚಾಲಕರ, ನಿರ್ವಾಹಕರ ಮತ್ತು ಪ್ರಯಾಣಿಕರ‌ ಸುರಕ್ಷತೆಗೆ ಒತ್ತು ಕೊಡುವುದಾಗಿ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದರು.

ಇದೀಗ ಎರಡು ರಾಜ್ಯದ ‌ಮಧ್ಯೆ ಹಂತ ಹಂತವಾಗಿ ಬಸ್ ಸಂಚಾರ ಆರಂಭವಾಗಿದೆ. ಬೆಳಗಾವಿಯಿಂದ ಕೊಲ್ಲಾಪುರ, ಪುಣೆ, ಮುಂಬೈ, ಶಿರಡಿ, ನಾಸಿಕ್ ಗೆ  ಬಸ್ ಸೇವೆ ಆರಂಭವಾಗಿದ್ದು, ಮಹಾರಾಷ್ಟ್ರದಿಂದಲೂ ರಾಜ್ಯಕ್ಕೆ ಬಸ್ ಸಂಚರಿಸುತ್ತಿವೆ. ಸದ್ಯ ಕೊಲ್ಲಾಪುರದಿಂದ ಸಂಕೇಶ್ವರವರೆಗೂ ಮಹಾರಾಷ್ಟ್ರ ಬಸ್ ಗಳು ಬರುತ್ತಿದ್ದು, ಇಂದು ಪೂರ್ಣಪ್ರಮಾಣದ ಬಸ್ ಸಂಚಾರ ಆರಂಭಗೊಂಡಿದೆ.

Key words: Bus service, between, Karnataka, Maharashtra, begins