ಪ್ರವಾಸೋದ್ಯಮ ಅಭಿವೃದ್ಧಿಗೆ ಸಾವಿರ ಕೋಟಿಗಿಂತ ಹೆಚ್ಚಿನ ಅನುದಾನ: 1.5 ಲಕ್ಷ ಉದ್ಯೋಗ ಸೃಷ್ಟಿ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ,27,2025 (www.justkannada.in): ಪ್ರವಾಸೋದ್ಯಮದಲ್ಲಿನ ಭವಿಷ್ಯದ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು  ಕರ್ನಾಟಕ ಪ್ರವಾಸೋದ್ಯಮ ಪಾಲಿಸಿ 2024-2029 ಜಾರಿಗೆ ತರಲಾಗುತ್ತಿದೆ. 1.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಪಾಲಿಸಿ ಜಾರಿಗೆ ತರಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಾವಿರ ಕೋಟಿಗಿಂತ ಹೆಚ್ಚಿನ ಅನುದಾನ ಒದಗಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ನಗರದ ಖಾಸಗಿ ಹೋಟೆಲ್ ತಾಜ್ ವೆಸ್ಟ್ ಎಂಡ್ ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಮ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಎರಡನೇ ಆವೃತ್ತಿಯ “ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ-2025″ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ಕರ್ನಾಟಕ ಗುರುತಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.

ಕರ್ನಾಟಕವನ್ನು ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ಗುರುತಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿವಿಧತೆಯಲ್ಲಿ ಏಕತೆ ಎಂಬಂತೆ ರಾಜ್ಯ ಎಲ್ಲಾ ರೀತಿಯ ಪ್ರವಾಸಿ ತಾಣಗಳನ್ನು ಹೊಂದಿದೆ, ಹಲವು ಜಗತ್ತು ಒಂದು ರಾಜ್ಯ ನಮ್ಮದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಕರ್ನಾಟಕದ ಕಾಡುಗಳು, ಐತಿಹಾಸಿಕ ತಾಣಗಳು, ಸಂಸ್ಕೃತಿ, ಕಲೆ, ಜನಪದ ಹೀಗೆ ರಾಜ್ಯದ ಪ್ರತಿ ಮೂಲೆ ಸಹ ಪ್ರವಾಸಿ ತಾಣವಾಗಿದೆ. ವಿಮಾನಯಾನ, ರಸ್ತೆ, ರೈಲು ಸೇರಿದಂತೆ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಪ್ರವಾಸಿತಾಣಗಳ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯಕ್ಕೆ ಜಾಗತಿಕವಾಗಿ ಪ್ರವಾಸಿಗಳನ್ನು ಸೆಳೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ನಮ್ಮ ರಾಜ್ಯವು 4 UNESCO ವಿಶ್ವ ಪರಂಪರೆಯ ತಾಣಗಳು, 35 ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು, ಪ್ರಾಚೀನ ಗಿರಿಧಾಮಗಳು, ಆಧ್ಯಾತ್ಮಿಕ ಕೇಂದ್ರಗಳು, ಸಾಹಸ ತಾಣಗಳು ಮತ್ತು ದೇಶದ ಕೆಲವು ಅತ್ಯುತ್ತಮ ಸ್ವಾಸ್ಥ್ಯ ಹಿಮ್ಮೆಟ್ಟುವಿಕೆಗಳಿಗೆ ನೆಲೆಯಾಗಿದೆ. ಕರ್ನಾಟಕವು ಪ್ರಾಚೀನ ದೇವಾಲಯಗಳು, ಜೈನ ಬಸದಿಗಳು ಮತ್ತು ನಮ್ಮ ವೈವಿಧ್ಯಮಯ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಸೂಫಿ ದೇವಾಲಯಗಳಿಂದ ಆಶೀರ್ವದಿಸಲ್ಪಟ್ಟಿದೆ. ಪಶ್ಚಿಮ ಘಟ್ಟಗಳು ರೋಮಾಂಚನಕಾರಿ ತಪ್ಪಿಸಿಕೊಳ್ಳುವಿಕೆಯನ್ನು ಒದಗಿಸುತ್ತವೆ, ಮತ್ತು ನಮ್ಮ ರೋಮಾಂಚಕ ಕರಾವಳಿಗಳು ಪ್ರಶಾಂತತೆ ಮತ್ತು ಜಲ ಕ್ರೀಡೆಗಳನ್ನು ಬಯಸುವವರನ್ನು ಸ್ವಾಗತಿಸುತ್ತವೆ. ಕರ್ನಾಟಕವು ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸತತವಾಗಿ ಸ್ಥಾನ ಪಡೆದಿರುವುದು ಆಶ್ಚರ್ಯವೇನಿಲ್ಲ ಎಂದು ನುಡಿದರು.

ಕರ್ನಾಟಕ ಕೇವಲ ಒಂದು ತಾಣವಲ್ಲ-ಅದು ಒಂದು ಭಾವನೆ. ಇಲ್ಲಿ ಭೂತಕಾಲವು ಭವಿಷ್ಯವನ್ನು ಸಂಧಿಸುತ್ತದೆ. ಅಲ್ಲಿ ಸಂಪ್ರದಾಯವು ಆಧುನಿಕತೆಯೊಂದಿಗೆ ಬೆರೆಯುತ್ತದೆ ಮತ್ತು ಪ್ರತಿಯೊಬ್ಬ ಪ್ರವಾಸಿಗರು ಸ್ವಂತ ಮನೆಯ ಅನುಭವ ಪಡೆಯುತ್ತಾರೆ. ಪ್ರವಾಸೋದ್ಯಮ ಬೆಳವಣಿಗೆಗೆ ಖಾಸಗಿಯವರಿಗೆ ಬಂಡವಾಳ ಹೂಡಿಕೆಗೆ ಅಗತ್ಯವಾದ ಸಹಾಯವನ್ನು ನೀಡಲು ಸರ್ಕಾರ ಹರ್ಷಿಸುತ್ತದೆ, ಬಂಡವಾಳ ಹಾಗೂ ಮಾರುಕಟ್ಟೆ ವಿಸ್ತರಣೆ ಮೂಲಕ ರಾಜ್ಯವನ್ನು ದೇಶದ ಹಾಗೂ ಜಗತ್ತಿನ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡಿ ಎಂದು ಕರೆ ನೀಡಿದರು.

ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಅವರು ಮಾತನಾಡಿ ಜಾಗತಿಕವಾಗಿ ಕರ್ನಾಟಕದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಅವಕಾಶಕ್ಕಾಗಿ ಹೆಮ್ಮೆ ಎನಿಸುತ್ತದೆ. ಕರ್ನಾಟಕ ಸಾಂಸ್ಕೃತಿಕವಾಗಿ, ಐತಿಹಾಸಿಕ, ಪರಿಸರ ಸೇರಿದಂತೆ ಧಾರ್ಮಿಕವಾಗಿ ಸಹ ಅತಿ ಮುಖ್ಯವಾದ ಪ್ರವಾಸಿತಾಣಗಳನಗಳನ್ನು ಹೊಂದಿದೆ. ಇಲ್ಲಿನ‌ ಜನಪದ ಕಲೆಗಳು ದೇಶದ್ಯಾಂತ ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯ ಅತ್ಯಂತ ಸಾಂಸ್ಕೃತಿಕವಾಗಿ ಶ್ರೀಮಂತ ಹಾಗೂ ಪ್ರಸ್ತುತ ಜಾಗತಿಕ ಬೆಳವಣಿಗೆಯಲ್ಲಿ ಗುರುತಿಸಿಕೊಂಡಿರುವ ರಾಜ್ಯವಾಗಿದೆ. ಶಕ್ತಿ ಯೋಜನೆಯಿಂದ ರಾಜ್ಯದ ಪ್ರವಾಸೋದ್ಯಮ ಬೆಳವಣಿಗೆಯಾಗಿದೆ ಎಂದರು.

ಭವಿಷ್ಯದಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಿರಂತರವಾಗಿದೆ. ರಾಜ್ಯದ ಐತಿಹಾಸಿಕ ಸ್ಥಳಗಳನ್ನು ಖಾಸಗಿಯವರು ಸಹ ದತ್ತು ಪಡೆಯುವ ಯೋಜನೆ ಯಶಸ್ವಿಯಾಗಿದೆ, ಇಲ್ಲಿಯವರೆಗೆ 20 ಸ್ಥಳಗಳನ್ನು ಖಾಸಗಿಯವರಿಗೆ ದತ್ತು ನೀಡಲಾಗಿದೆ. ಪ್ರವಾಸೋದ್ಯಮ ರಾಜ್ಯದ ಮುಖ್ಯ ಆರ್ಥಿಕ ಶಕ್ತಿಯಲ್ಲಿ ಒಂದಾಗಿದೆ. ವಿವಿಧ ಪ್ರವಾಸೋದ್ಯಮ ಗಳನ್ನು ಪ್ರೋತ್ಸಾಹಿಸಲು ಪ್ರವಾಸೋದ್ಯಮ ಪಾಲಿಸಿ 2024-2029 ಜಾರಿಗೆ ತರಲಾಗಿದೆ, ಇದರಲ್ಲಿ ಅನೇಕ ಹೊಸ ಪಾಲಿಸಿಗಳನ್ನು ಜಾರಿಗೆ ತರಲಾಗಿದೆ. ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರ ಬದ್ದವಾಗಿದ್ದು, ರಾಜ್ಯದ ಪ್ರವಾಸೋದ್ಯಮವನ್ನು ಜಾಗತಿಕವಾಗಿ ಬೆಳೆಸಲು ಉದ್ದೇಶಿಸಲಾಗಿದೆ. ಇದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅದರ ಪ್ರತಿಯಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಾಜಿ ನಗರದ ಶಾಸಕ ರಿಜ್ವಾನ್ ಅರ್ಷದ್ ಅವರು ಕರ್ನಾಟಕವನ್ನು ನಂಬಿ ಕೆಟ್ಟವರಿಲ್ಲ, ಹೊರದೇಶ ಹಾಗೂ ರಾಜ್ಯಗಳಿಂದ ಆಗಮಿಸಿರುವ ಪ್ರವಾಸೋದ್ಯಮ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಭಯಬೇಡ, ನಮ್ಮದು ಅತ್ಯುತ್ತಮ ರಾಜ್ಯವಾಗಿದ್ದು ಇಲ್ಲಿನ ಜನ, ಸಂಸ್ಕೃತಿ, ಕಲೆ, ಗುಣ ಎಲ್ಲವೂ ಶ್ರೀಮಂತಿಕೆಯಿಂದ ಕೂಡಿದೆ. ಇದೊಂದು ಶಿಕ್ಷಣ ಹಬ್ ಆಗಿ ಸಹ ಗುರುತಿಸಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರುಗಳಾದ ಕೆ.ಹೆಚ್ ಮುನಿಯಪ್ಪ, ಎನ್ ಎಸ್ ಬೋಸರಾಜು, ಡಾ ಎಂ.ಸಿ ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ ಕೆ.ಗೋವಿಂದರಾಜು, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್, ವಿಧಾನಪರಿಷತ್ ಸದಸ್ಯರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ ಕೆ.ವಿ ರಾಜೇಂದ್ರ ಅವರು ಸ್ವಾಗತಿಸಿದರು. ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ ಫಹೀಮ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು, ಕರ್ನಾಟಕ ಟೂರಿಸಂ ಸೋಸೈಟಿಯ ಅಧ್ಯಕ್ಷ ಶಾಮರಾಜು ಅವರು ವಂದನಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024-2029 ಬಿಡುಗಡೆ ಮಾಡಲಾಯಿತು.

Key words: Over, Rs 1,000 crore, grant, tourism development, CM Siddaramaiah