ಮೈಸೂರು, ಫೆ.೨೭,೨೦೨೫ (www.justkannada.in): ಪತ್ರಕರ್ತರು ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳದಿದ್ದರೆ ಪತ್ರಕರ್ತರಾಗಲು ಯೋಗ್ಯರಲ್ಲ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಯುವ ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ವಾರ್ತಾ ಇಲಾಖೆ, ಮಾಧ್ಯಮ ಅಕಾಡೆಮಿ ಹಾಗೂ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ “ ಏನ್ ಸಮಾಚಾರ..! “ ಮಾಧ್ಯಮ ಹಬ್ಬ ಸಮಾರಂಭವನ್ನು ಉದ್ಘಾಟಸಿ ಮಾತನಾಡಿದರು. ತರಗತಿಯಲ್ಲೇ ಆಗಲಿ ಅಥವಾ ವೃತ್ತಿ ಜೀವನದಲ್ಲೇ ಆಗಲಿ ಪ್ರಶ್ನಿಸುವ ಪ್ರವೃತ್ತಿಯನ್ನು ಯುವ ಪತ್ರಕರ್ತರು ಬೆಳೆಸಿಕೊಳ್ಳಬೇಕು. ಅದರಲ್ಲೂ ಪತ್ರಕರ್ತರಾಗುವ ಉದ್ದೇಶ ಹೊಂದಿರುವ ನೀವು ಸಮಾಜದ ಹಿತಕ್ಕೆ ಪೂರಕವಾಗುವ ಸಂಗತಿಗಳ ಬಗೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಸುದ್ದಿ ಮನೆಯ ಬೆನ್ನೆಲುಬು
ಜಿಲ್ಲಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವರದಿಗಾರರೇ ಸುದ್ಧಿ ಮನೆಯ ಬೆನ್ನೆಲುಬು. ನೀವು ನೀಡುವ ವರದಿ ಆಧರಿಸಿ ಕೇಂದ್ರ ಕಚೇರಿ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ದೆಹಲಿ ಹಾಗೂ ಬೆಂಗಳೂರಿನಂತಹ ಕೇಂದ್ರ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಷ್ಟೆ ನಿಮ್ಮ ಜವಾಬ್ದಾರಿಯೂ ಹೆಚ್ಚಿರುತ್ತದೆ ಎಂದರು.
ಡಿಜಿಟಲ್ ಜಮಾನ
ಮುದ್ರಣ ಮಾಧ್ಯಮ ಆಯ್ತು, ಎಲೆಕ್ಟ್ರಿನಿಕ್ ಮೀಡಿಯಾಗಳು ಆಯ್ತು ಈಗ ಡಿಜಿಟಲ್ ಮಾಧ್ಯಮಗಳ ಕಾಲ. ಇಡೀ ವಿಶ್ವವೇ ಒಂದು ಗ್ಲೋಬಲ್ ವಿಲೇಜ್ ಎಂಬಂತಾಗಿದೆ. ಕೈ ಬೆರಳಿನ ತುದಿಯಲ್ಲೇ ಸಮಗ್ರ ಮಾಹಿತಿಯೂ ಲಭ್ಯ. ಆದ್ದರಿಂದ ಹೊಸಹೊಸ ತಂತ್ರಜ್ಞಾನಗಳ ಬಗ್ಗೆ ಕುತೂಹಲ ಬೆಳೆಸಿಕೊಂಡು ಅದನ್ನು ಕಲಿಯುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಮಾಧ್ಯಮ ಅಕಾಡೆಮಿ ರಾಜ್ಯ ಸರಕಾರದ ಸಹಯೋಗದಲ್ಲ ತಾಂತ್ರಿಕಾ ತರಬೇತಿ ನೀಡಲು ಯೋಜನೆ ರೂಪಿಸುತ್ತದೆ. ಇದನ್ನ ಯುವ ಪತ್ರಕರ್ತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಯೇಷಾ ಖಾನಂ ಸಲಹೆ ನೀಡಿದರು.
ವಿಶ್ವಾಸಾಹರ್ತೆ ಮುಖ್ಯ:
ಎನ್.ಡಿ.ಟಿ.ವಿ. ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮಾಯಾ ಶರ್ಮಾ ಮಾತನಾಡಿ, ಪತ್ರಕರ್ತರಿಗೆ ವಿಶ್ವಾಸಾಹರ್ತೆ ಮುಖ್ಯ. ವೃತ್ತಿ ಜೀವನದಲ್ಲಿ ಹಲವಾರು ಪ್ರಭಾವಿಗಳು, ಅಧಿಕಾರಿಗಳು, ಸೆಲೆಬ್ರಿಟಿಗಳ ಪರಿಚಯವಾಗುತ್ತಾರೆ. ಈ ವೇಳೆ ನೀವು ನಿಮ್ಮತನವನ್ನು ಬಿಡದೆ ಪ್ರಾಮಾಣಿಕತೆ ಹಾಗೂ ಸರಳತೆಯಿಂದಲೇ ವರ್ತಿಸಬೇಕಾಗುತ್ತದೆ. ನಿಮ್ಮ ವೃತ್ತಿಯಲ್ಲಿ ವಿಶ್ವಾಸಾರ್ಹತೆ ಬಹಳ ಮುಖ್ಯವಾಗುತ್ತದೆ ಎಂದು ಯುವ ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಪತ್ರಕರ್ತರು ಸತ್ಯದ ಪರವಾಗಿ ಕಾರ್ಯನಿರ್ವಹಿಸಬೇಕು ಹೊರತು ಬಲ ಅಥವಾ ಎಡ ಪಂಥಗಳಿಗೆ ವಾಲದೆ ನೇರ ಹಾಗೂ ನಿಷ್ಠೂರತೆಯಿಂದ ನ್ಯಾಯಪರವಾಗಿರಬೇಕು ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಮಾತನಾಡಿ, ವಿದ್ಯೆ, ವಸ್ತುನಿಷ್ಠತೆ, ನಿರಂತರ ಶ್ರಮ, ಸದೃಢ ಮನಸ್ಥಿತಿ, ಈ ಅಂಶಗಳನ್ನು ಪತ್ರಿಕೋದ್ಯಮ ಮತ್ತು ಸಂವಹನದ ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗುತ್ತಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಒಂದೇ ವಿಚಾರದ ಬಗ್ಗೆ ಚರ್ಚಿಸುತ್ತಿದ್ದಾರೆ. ಇಂದಿನ ತಂತ್ರಜ್ಞಾನದ ದಿನಗಳಲ್ಲಿ ಡಿಜಿಟಲ್ ಬಳಸಿಕೊಳ್ಳುತ್ತಾರೆ. ಮಕ್ಕಳಿಗೆ ಹೆಚ್ಚು ಓದು ಹವ್ಯಾಸವಿಲ್ಲ. ನಿಜವಾದ ಪತ್ರಕರ್ತರಾದವರು ಚೆನ್ನಾಗಿ ಓದಬೇಕು. ನೀವು ಬರೆದ ಲೇಖನದ ಬಗ್ಗೆ ಮಾತನಾಡಬೇಕು. ಸುದ್ದಿಯಲ್ಲಿ ನಿಖರತೆ ವಸ್ತು ನಿಷ್ಠೆ ಪ್ರಾಮಾಣಿಕತೆ ಇರಬೇಕು. ಸತ್ಯಕ್ಕಿಂತ ಸುಳ್ಳು ತುಂಬಾ ವೈರಲ್ ಆಗುತ್ತಿದೆ. ಪತ್ರಿಕೋದ್ಯಮದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿಯ ರಿಜಿಸ್ಟ್ರಾರ್ ಸಹನಾ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎನ್.ಮಮತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಹಾಗೂ ಮತ್ತಿತರರು ಇದ್ದರು. ಹಿರಿಯ ಪತ್ರಕರ್ತೆ ಹಾಗೂ ಮಾಧ್ಯಮ ಅಕಾಡಮಿ ಸದಸ್ಯೆ ಎಂ.ಸಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.
Key words: Mysore, Media Festival, Journalists, questioning attitude, Ayesha Khanam