KAS ಪೂರ್ವಭಾವಿ ಮರು ಪರೀಕ್ಷೆ ರದ್ದುಗೊಳಿಸಿ ಹೊಸ ಅಧಿಸೂಚನೆ ಹೊರಡಿಸಿ- ಆರ್.ಅಶೋಕ್ ಆಗ್ರಹ

ಬೆಂಗಳೂರು,ಮಾರ್ಚ್,4,2025 (www.justkannada.in): ದೊಡ್ಡ ಪ್ರಮಾಣದಲ್ಲಿ ಪ್ರಶ್ನೆಪತ್ರಿಕೆಗಳಲ್ಲಿ ತಪ್ಪುಗಳಿರುವ ಹಿನ್ನೆಲೆಯಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ (ಕೆಎಎಸ್) ನಡೆಸಿರುವ ಪೂರ್ವಭಾವಿ ಮರು ಪರೀಕ್ಷೆಯನ್ನು ರದ್ದುಗೊಳಿಸಬೇಕು. ಹಾಗೆಯೇ ಹಳೇ ಅಧಿಸೂಚನೆ ಹಿಂದಕ್ಕೆ ಪಡೆದು ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ನಿಯಮ 69 ರ ಅಡಿಯಲ್ಲಿ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಕೆಪಿಎಸ್ಸಿ ಕುರಿತು ಮಾತನಾಡಿದ ಆರ್.ಅಶೋಕ್,  ವಯಸ್ಸಿನ ಮಿತಿ ನಿರ್ಬಂಧ ಸಡಿಲಿಸಿ ಅರ್ಜಿ ಸಲ್ಲಿಸಿದ್ದ ಎಲ್ಲ 2.30 ಲಕ್ಷ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಗೂಗಲ್ ಭಾಷಾಂತರದ ಮೂಲಕ ಕನ್ನಡಕ್ಕೆ ಅಪಮಾನ ಮಾಡಿರುವ ಅಧಿಕಾರಿಗೆ ಭಾಷಾನೀತಿ ಅವಹೇಳನ ಮಾಡಿದ ಆರೋಪದ ಮೇರೆಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಬೇಜವಾಬ್ದಾರಿ ಮತ್ತು ಹೊಣೆಗಾರಿಕೆ ಮರೆತು ಕಾರ್ಯ ನಿರ್ವಹಿಸಿರುವ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ ಅವರ ವಿರುದ್ಧ ವಿಚಾರಣೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಹಾಗೆಯೇ ಮರು ಪರೀಕ್ಷೆಗಳಿಂದ ಆಗಿರುವ 25 ಕೋಟಿ ರೂ.ಗಳಿಗೂ ಅಧಿಕ ಹಣದ ನಷ್ಟವನ್ನು ತಪ್ಪಿತಸ್ಥರಿಂದಲೇ ವಸೂಲಿ ಮಾಡಬೇಕು. ಪದೇ ಪದೇ ಪ್ರಶ್ನೆಪತ್ರಿಕೆ ಗೊಂದಲ ಆಗದಂತೆ ಎಚ್ಚರವಹಿಸಲು ಯುಪಿಎಸ್‌ಸಿ ಮಾದರಿ ಅಳವಡಿಸಿಕೊಳ್ಳಲು ಸೂಚನೆ ನೀಡಬೇಕು. ಕಮರ್ಷಿಯಲ್ ಟ್ಯಾಕ್ಸ್ ಇನ್ಸ್‌ಪೆಕ್ಟ‌ರ್ ಮತ್ತು ಎಇಇ (ಎಂಜಿನಿಯರ್)ಹುದ್ದೆಗಳಲ್ಲೂ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಆರ್ ಅಶೋಕ್ ಹೇಳಿದರು.

Key words: Cancel, KAS preliminary, re-examination, R. Ashok