ಮೈಸೂರು,ಮಾರ್ಚ್,5,2025 (www.justkannada.in): ದಲಿತ ಸಂಘಟನೆಗಳ ಮುಂಚೂಣಿ ಮುಖಂಡರು ಹಾಗೂ ರಾಜಕೀಯ ಪಕ್ಷಗಳ ನಾಯಕರ ನಡುವೆ ಸ್ವಹಿತಾಸಕ್ತಿಯ ಒಳ ಒಪ್ಪಂದಗಳು ಏರ್ಪಟ್ಟಿರುವುದರಿಂದಲೆ ದಲಿತ ಚಳವಳಿಗೆ ಬಹುದೊಡ್ಡ ಹಿನ್ನಡೆಯಾಗಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಗರದ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ನಡೆದ ‘ ದಲಿತ ಚಳವಳಿಯ ವರ್ತಮಾನದ ಸವಾಲುಗಳು ಮತ್ತು ಮಾರ್ಗೋಪಾಯಗಳು’ ಕುರಿತ ವಿಭಾಗೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂದು ದಲಿತ ಚಳಚಳಿ ಎಂದರೆ ನಡುಗುತ್ತಿದ್ದ ಕರ್ನಾಟಕ ಇಂದು ನಗುವ ಸ್ಥಿತಿಗೆ ತಲುಪಿದೆ ಎಂದು ವಿಷಾದಿಸಿದರು.
50 ವರ್ಷಗಳ ಇತಿಹಾಸವಿರುವ ದಲಿತ ಸಂಘರ್ಷ ಸಮಿತಿಯು ದಲಿತ ಚಳವಳಿಯ ಕರ್ನಾಟಕದ ಅಸ್ಮಿತೆ. ದಲಿತರ ಮೇಲಿನ ದೌರ್ಜನ್ಯ ತಡೆ, ಶಿಕ್ಷಣದಲ್ಲಿ ಸುಧಾರಣೆ, ಸಮ ಸಮಾಜ ನಿರ್ಮಾಣ ಹಾಗೂ ಸಂವಿಧಾನದ ಆಶಯಗಳ ರಕ್ಷಣೆಯಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಆದರೆ, ಕಾಲ ಉರುಳಿದಂತೆ, ವ್ಯಕ್ತಿಗಳ ಸ್ವಾರ್ಥ, ಪ್ರತಿಷ್ಠೆ ಹಾಗೂ ಅಧಿಕಾರದ ದಾಹದಿಂದಾಗಿ ಚಳವಳಿ ದಿಕ್ಕು ತಪ್ಪಿದೆ. ಒಂದೊಂದು ಬಣವೂ ಒಂದೊಂದು ಪಕ್ಷದ ಕೈಗೊಂಬೆಯಾಗಿ ಜನತ ವಿಶ್ವಾಸ ಕಳೆದುಕೊಳ್ಳುತ್ತಿದೆ. ಇದರಿಂದ ಹೊರಬಂದು ದಲಿತ ಚಳವಳಿಗೆ ಮರು ಹುಟ್ಟು ನೀಡಬೇಕಾಗಿದೆ ಎಂದು ತಿಳಿಸಿದರು.
ಬಿಜೆಪಿಯು ತನ್ನ ನಡವಳಿಕೆಯಿಂದ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಮೀಸಲಾತಿ ವಿರೋಧಿ ಎಂಬುವುದನ್ನು ಪದೇ ಪದೇ ನಿರೂಪಿಸುತ್ತಿದೆ. ಮತ್ತೊಂದೆಡೆ, ಅಧಿಕಾರ ಇಲ್ಲದಿದ್ದಾಗ ದಲಿತರನ್ನು ಕಂಡರೆ ಹೆತ್ತ ತಾಯಿಯಂತೆ ವರ್ತಿಸುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮಲತಾಯಿ ರೂಪ ತಾಳುತ್ತಿದೆ. ಒಟ್ಟಾರೆ, ಯಾವ ಸರಕಾರದಿಂದಲೂ, ಯಾವ ಪಕ್ಷಗಳಿಂದಲೂ ದಲಿತರ ಏಳಿಗೆ ಸಾಧ್ಯವಾಗುತ್ತಿಲ್ಲ. ಕನಿಷ್ಠಿ ಬಾಯಲ್ಲಿ ಸಂವಿಧಾನ ಉಳಿಯಬೇಕು ಎಂದೇ ಹೇಳುವ ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ನುಡಿದರು.
50 ವರ್ಷದ ಹಿಂದಿನ ಪರಿಸ್ಥಿತಿಗೂ ಇಂದಿಗೂ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಸ್ಥಿತಿಗಳು ಬದಲಾಗಿದ್ದು, ಬದಲಾದ ಕಾಲಮಾನಕ್ಕೆ ತಕ್ಕಂತೆ ಚಳವಳಿಯ ಸ್ವರೂಪವೂ ಬದಲಾಗಬೇಕು ಎಂದ ಅವರು, ದಲಿತರ ಮೇಲಿನ ಶೋಷಣೆ ಮತ್ತು ಅವಕಾಶ ವಂಚನೆಗೆ ವೈಚಾರಿಕ ಪ್ರತಿರೋಧ ಮತ್ತು ಅಂಬೇಡ್ಕರ್ ಮಾರ್ಗ ಒಂದೇ ಪರಿಹಾರ ಎಂದು ತಿಳಿಸಿದರು.
ವಿಷಯ ಕುರಿತು ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ಸಂಯೋಜಕ ಚಂದ್ರಗುತ್ತ, ದಲಿತರು ಆರ್ಥಿಕ ಸ್ವಾವಲಂಬನೆಗೆ ಕೈಗಾರಿಕೆಗಳ ಸ್ಥಾಪನೆ, ಸಹಕಾರ ಸಂಘಗಳ ಆರಂಭ, ಬ್ಯಾಕಿಂಗ್ ಚಟುವಟಿಕೆ, ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು. ನೀವು ಹಿಂದೂ ದೇವಸ್ಥಾನಗಳ ಹುಂಡಿ ತುಂಬಿಸುವ ಬದಲು ನಿಮ್ಮ ಹುಂಡಿ ತುಂಬಿಸಿಕೊಳ್ಳಲು ಆದ್ಯತೆ ನೀಡಿ ಎಂದು ಕಿವಿಮಾತು ಹೇಳಿದರು.
ಹಿರಿಯ ರಂಗಕರ್ಮಿ ಜನಾರ್ದನ (ಜನ್ನಿ) ಮಾತನಾಡಿ, ದಲಿತ ಚಳವಳಿ ನಡೆದು ಬಂದ ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ನಿಮ್ಮ ನಿಮ್ಮ ಒಳಗಿನ ಸ್ವ ಪ್ರತಿಷ್ಠೆಗಳನ್ನು ಬಿಟ್ಟು ಚಳವಳಿಯನ್ನು ಮುನ್ನೆಡೆಸಿರಿ. ಆರಂಭದ ದಿನಗಳಲ್ಲಿ ದಲಿತ ಚಳವಳಿ ಎಂದರೆ ನಡುಗುತ್ತಿದ್ದ ವಿಧಾನಸೌಧ ಈಗ ನಗುವ ಸ್ಥಿತಿಗೆ ಬಂದಿದೆ ಎಂದರು. ದಸಂಸ ( ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ನಂತರ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ದಸಂಸ ತಾಲೂಕು ಪ್ರತಿನಿಧಿಗಳ ಸರ್ವ ಸದಸ್ಯರ ಸಭೆ ನಡೆಯಿತು.
Key words: Internal, agreement, Dalit organization, leaders, political parties, K. Deepak