ಮೈಸೂರು,ಅ,5,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿಯಿದ್ದು, ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ.
ಈ ನಡುವೆ ಇಂದು ವಿಜಯದಶಮಿಯ ದಿನ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಗಣ್ಯರು ಪುಷ್ಪಾರ್ಚನೆ ಮಾಡಲಿರುವ ಹಿನ್ನೆಲೆ, ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿಂದು ಜಂಬೂ ಸವಾರಿ ಮೆರವಣಿಗೆಯ ರಿಹರ್ಸಲ್ ನಡೆಯಿತು.
ಈ ಬಾರಿಯೂ ಹಿರಿಯ ಅನುಭವಿ ಬಲರಾಮ ಮೆರವಣಿಗೆಯನ್ನು ಮುನ್ನಡೆಸಲಿದ್ದು, ಮೆರವಣಿಗೆ ರಿಹರ್ಸಲ್ ನಲ್ಲಿ ನಿಶಾನೆ ಆನೆಯಾಗಿ ಬಲರಾಮ ಎಲ್ಲರಿಗಿಂತ ಮುಂಚೂಣಿಯಲ್ಲಿ ಸಾಗಿದನು. ನೌಪತ್ತು ಆನೆಯಾಗಿ ಬಲರಾಮನನ್ನು ಹಿಂಬಾಲಿಸುತ್ತ ಅಭಿಮನ್ಯು ಬಳಿಕ ಸಾಲಾನೆಗಳಾಗಿ ಇತರೇ ಆನೆಗಳು ಸಾಗಿದವು.
ಈ ನಡುವೆ ವೇದಿಕೆ ಬಳಿ ಬರುತ್ತಿದ್ದಂತೆ ಈಶ್ವರ ಆನೆ ಕೊಂಚ ವಿಚಲಿತನಾದನು. ಗಣ್ಯರು ಉಪಸ್ಥಿತರಿದ್ದ ವೇದಿಕೆಯ ಬಳಿ ಬರುತ್ತಿದ್ದಂತೆ ಈಶ್ವರ ಹಿಂದಕ್ಕೆ ಸರಿದನು. ಈ ವೇಳೆ ಮಾವುತರು ಕಾವಾಡಿಗಳು ಈಶ್ವರನನ್ನು ನಿಯಂತ್ರಿಸಿದವು. ನಂತರ ಅಂಬಾರಿ ಆನೆ ಅರ್ಜುನ ಹಾಗೂ ಕುಮ್ಕಿ ಆನೆಗಳಾದ ವಿಜಯ ಮತ್ತು ಕಾವೇರಿ ಆಗಮಿಸುತ್ತಿದ್ದಂತೆ ವೇದಿಕೆ ಮೇಲಿದ್ದ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್, ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಚೆನ್ನಯ್ಯ ಅವರು ಅಂಬಾರಿ ಆನೆ ಅರ್ಜುನನಿಗೆ ಪುಷ್ಪಾರ್ಚನೆ ಮಾಡಿದರು.
ಗಣ್ಯರು ಪುಷ್ಪಾರ್ಚನೆಗೈಯುತ್ತಿದ್ದಂತೆ ಪೊಲೀಸರು ರಾಷ್ಟ್ರಗೀತೆ ನುಡಿಸಿದರು. ಇದೇ ವೇಳೆ ಅರಮನೆಯ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮನ ದೇಗುಲದ ಸನಿಹದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು 21 ಕುಶಾಲತೋಪುಗಳನ್ನು ಸಿಡಿಸಿದರು. ನಂತರ ಕ್ಯಾಪ್ಟನ್ ಅರ್ಜುನ ಅತ್ಯಂತ ಗಂಭೀರವಾಗಿ ಹೆಜ್ಜೆ ಹಾಕುತ್ತಾ ಸಾಗಿದನು. ದಸರಾ ಗಜಪಡೆಯ ಜೊತೆಗೆ ಶಿಸ್ತು ಬದ್ದವಾಗಿ ಪೊಲೀಸ್ ತುಕಡಿಗಳು ಸಾಗಿದವು. ಅಶ್ವಾರೋಹಿ ದಳ, ನಗರ ಸಶಸ್ತ್ರ ಮೀಸಲು ಪಡೆ, ರಾಜ್ಯ ಮೀಸಲು ಪಡೆ ಸೇರಿದಂತೆ ಹತ್ತು ಪೊಲೀಸ್ ತುಕಡಿಗಳು ಜಂಬೂಸವಾರಿ ಮೆರವಣಿಗೆ ರಿಹರ್ಸಲ್ ನಲ್ಲಿ ಭಾಗಿಯಾಗಿದ್ದವು.
Key words: Mysore Dasara – Workout -Jamboosavari-Captain Arjuna