ಮೈಸೂರು,ಮಾರ್ಚ್,6,2025 (www.justkannada.in): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಬೆಂಕಿಬಿದ್ದ ವೇಳೆ ನೀರು ಕೊಡಲು ನಿರಾಕರಿಸಿದ ಪ್ರತಿಷ್ಠಿತ ಹೋಟೆಲ್ ಮಾಲ್ ಆಫ್ ಮೈಸೂರಿಗೆ ಕಾರಣ ಕೇಳಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ನೋಟಿಸ್ ನೀಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಹಬ್ಬಿದ್ದ ಬೆಂಕಿ ನಂದಿಸಲು ನೀರು ಕೊಡಿ ಎಂದು ಅಂಗಲಾಚಿದರೂ ಮಾಲ್ ಆಫ್ ಮೈಸೂರು ನೀರು ನೀಡಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಅಗ್ನಿಕರೆಗೆ ಅಸಹಕಾರ ನೀಡಿದ್ದು, ಬೆಂಕಿ ಆರಿಸಲು ನೀರು ನೀಡದೆ ದುರ್ವತನೆ ತೋರಲಾಗಿದೆ. ಈ ಬಗ್ಗೆ ಕಾರಣ ಕೇಳಿ ಮಾಲ್ ಆಫ್ ಮೈಸೂರು ವೈಸ್ ಪ್ರೆಸಿಡೆಂಟ್ ಸಂದೀಪ್ ಗೆ ನೋಟಿಸ್ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತು ನೋಟಿಸ್ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಮೈಸೂರು ವಲಯ, ಸರಸ್ವತಿಪುರಂ, ಮೈಸೂರು ರವರು ತಮ್ಮ ಪತ್ರದಲ್ಲಿ ದಿನಾಂಕ:21-02-2025 ರಂದು ಚಾಮುಂಡಿಬೆಟ್ಟದ ತಪ್ಪಲಿನಿಂದ ಅರಣ್ಯ ಬೆಂಕಿ ಶುರುವಾಗಿ ತೀವ್ರತರದಲ್ಲಿ ಕಾಡ್ಲಿಚ್ಚು ಆವರಿಸಿಕೊಂಡಿದ್ದು ಇದನ್ನು ನಂದಿಸಲು ನೀರಿನ ಅಗತ್ಯ ತೀವ್ರತರಹ ಇದ್ದ ಕಾರಣ ಹತ್ತಿರದಲ್ಲಿನ ಮಾಲ್ ಆಫ್ ಮೈಸೂರು ಕಟ್ಟಡದಲ್ಲಿ ಶೇಖರಿಸಿದ್ದ ನೀರನ್ನು 02 ಜಿಲವಾಹನಗಳಿಗೆ ತುಂಬಿಸಿಕೊಳ್ಳಲು ಸಾಧ್ಯವಾಗಿರುತ್ತದೆ. ತದ ನಂತರ ಅಪರ ಜಿಲ್ಲಾಧಿಕಾರಿಯವರು ಮಾಲ್ ಆಫ್ ಮೈಸೂರುರವರಿಗೆ ಅಗ್ನಿಶಾಮಕ ವಾಹನಗಳಿಗೆ ನೀರು ಕೊಡಲು ಸೂಚಿಸಿದ್ದರೂ ಮಾಲ್ ಆಫ್ ಮೈಸೂರುರವರು ಅಗ್ನಿಶಾಮಕ ವಾಹನಗಳಿಗೆ ನೀರನ್ನು ಕೊಡಲು ನಿರಾಕರಿಸಿದ್ದು ಇದರಿಂದಾಗಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹರಡಿದ್ದ ಬೆಂಕಿಯನ್ನು ನಂದಿಸುವ ಕಾರ್ಯ ವಿಳಂಬವಾಗಿರುತ್ತದೆಂದು ತಿಳಿಸಿದ್ದಾರೆ.
ಆದ ಕಾರಣ ಮಾಲ್ ಆಫ್ ಮೈಸೂರಿನ ಆಡಳಿತ ಮಂಡಳಿಗೆ ಅಗ್ನಿ ವಿಪತ್ತು ಸಂದರ್ಭಗಳಲ್ಲಿ ನೀರು ಕೊಟ್ಟು ಸಹಕರಿಸದೇ ಇರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿಪತ್ತು ನಿರ್ವಹಣ ಕಾಯ್ದೆ 2005 ರಂತೆ ವಿಪತ್ತುಗಳಿಗೆ ಪೂರಕವಾಗಿ ಸ್ಪಂದಿಸಲು ಸೂಚನೆ ನೀಡಬೇಕಾಗಿ ಕೋರಿದ್ದಾರೆ.
ವಿಪತ್ತಿನ ಸಂಧರ್ಭಗಳಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಯಾವುದೇ ಪ್ರಾಧಿಕಾರ, ವ್ಯಕ್ತಿ ಬಳಿ ಲಭ್ಯವಿರುವ ಸಂಪನ್ಮೂಲಗಳನ್ನು ಪಡೆದುಕೊಳ್ಳಲು ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 65 ರಂತೆ ಈ ಪ್ರಾಧಿಕಾರಕ್ಕೆ ಅಧಿಕಾರವಿರುತ್ತದೆ. ಅದರಂತೆ ಚಾಮುಂಡಿಬೆಟ್ಟದ ಅರಣ್ಯ ಬೆಂಕಿ ನಂದಿಸಲು ನೀರಿನ ಅಗತ್ಯ ತೀವ್ರತರಹ ಇದ್ದ ಕಾರಣ ಹತ್ತಿರದಲ್ಲಿನ ತಮ್ಮ ಕಟ್ಟಡದಲ್ಲಿ ಶೇಖರಿಸಿದ್ದ ನೀರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು ಈ ಪ್ರಾಧಿಕಾರದ ಅಗ್ನಿಶಾಮಕ ಇಲಾಖಾ ವಾಹನಗಳಿಗೆ ನೀರನ್ನು ಒದಗಿಸಿಲ್ಲ. ಇದರಿಂದಾಗಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹರಡಿದ್ದ ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಅಡಚಣೆಯುಂಟಾಗಿ ವಿಳಂಬವಾಗಿತ್ತು.
ಆದ ಕಾರಣ ಪ್ರಕರಣದಲ್ಲಿ ಈ ಪ್ರಾಧಿಕಾರದ ನಿರ್ದೇಶನವಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕ ಇಲಾಖಾ ವಾಹನಗಳಿಗೆ ನೀರನ್ನು ಒದಗಿಸದೇ ಇರುವುದಕ್ಕೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಏಕೆ ಅಗತ್ಯ ಕ್ರಮ ಜರುಗಿಸಬಾರದು ಎಂಬ ಬಗ್ಗೆ ಈ ನೋಟಿಸು ಪಡೆದ ಮೂರು ದಿವಸಗಳೊಳಗಾಗಿ ಲಿಖಿತ ಉತ್ತರ / ಸಮಜಾಯಿಷಿಯನ್ನು ನೀಡಬೇಕು. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇರುವುದಿಲ್ಲವೆಂದು ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಮೈಸೂರು ಡಿಸಿ ಲಕ್ಷ್ಮೀಕಾಂತ ರೆಡ್ಡಿ ಅವರು ನೋಟಿಸ್ ನಲ್ಲಿ ತಿಳಿಸಿದ್ದಾರೆ.
Key words: Mysore DC, notice , Mall of Mysore, water, fire