9 ವಿಶ್ವವಿದ್ಯಾಲಯಗಳನ್ನ ಮುಚ್ಚುವುದಿಲ್ಲ, ವಿಲೀನ ಮಾಡುತ್ತಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು, ಮಾರ್ಚ್​,6,2025 (www.justkannada.in): 9 ವಿಶ್ವವಿದ್ಯಾಲಯಗಳನ್ನ ಮುಚ್ಚುವುದಿಲ್ಲ, ಅವುಗಳನ್ನ ಬೇರೆ ವಿವಿಗಳ ಜೊತೆ ವಿಲೀನ ಮಾಡುತ್ತಿದ್ದೇವೆ ಎಂದು  ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಬಿಜೆಪಿ ಆಡಳಿತಾವಧಿಯಲ್ಲಿ ಸ್ಥಾಪಿಸಲಾದ  9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ಮುಂದಾಗಿರುವ ಬಗ್ಗೆ  ವಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು.

ಈ ವೇಳೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, ವಿಶ್ವವಿದ್ಯಾಲಯಗಳನ್ನು ಬೇರೆ ವಿವಿಗಳ ಜತೆ ವಿಲೀನ ಮಾಡುತ್ತಿದ್ದೇವೆ ಅಷ್ಟೇ. ಮುಚ್ಚುತ್ತಿದ್ದೇವೆ ಅಂತಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕೂ ಚಾಮರಾಜನಗರ ಅಥವಾ ಮಂಡ್ಯ ವಿವಿಯಲ್ಲಿ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಎಸ್.ಎಂ. ಕೃಷ್ಣ ವಿದೇಶಾಂಗ ಸಚಿವರಾಗಿದ್ದಾಗ ವಿಜಯೇಂದ್ರ ಅವರ ಅಕ್ಕನ ಮಗನಿಗೆ ಪಿಇಎಸ್ ವಿವಿಯಲ್ಲಿ ಓದಿದ್ದರೂ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಸಿಗಲಿಲ್ಲ. ಬೆಂಗಳೂರಿಗೆ ಪಿಇಎಸ್ ಫೇಮಸ್ ಕಾಲೇಜು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವೇಶ ಸಿಗಲಿಲ್ಲ. ವಿಶ್ವವಿದ್ಯಾಲಯಗಳನ್ನು ಬೇರೆ ವಿವಿಗಳ ಜತೆ ವಿಲೀನ ಮಾಡುತ್ತಿದ್ದೇವೆ ಅಷ್ಟೇ ಮುಚ್ಚುತ್ತಿದ್ದೇವೆ ಅಂತಲ್ಲ ಎಂದು ತಿಳಿಸಿದರು.

Key words: 9 universities, not close, merge, DCM, DK Sivakumar