ಕೇಂದ್ರದ ಅಸಹಕಾರ : ಬಜೆಟ್‌ ಮಂಡನೆ ವೇಳೆ ಎಳೆಎಳೆಯಾಗಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

Centre's non-cooperation: Siddaramaiah while presenting budget. We have proposed that at least 50 per cent of the tax share between the Centre and the states should be given to the states. This will ensure equitable distribution of resources between the Centre and states.

 

ಬೆಂಗಳೂರು, ಮಾ.೦೭,೨೦೨೫: ಕರ್ನಾಟಕ ರಾಜ್ಯವು, ಸುಸ್ಥಿರ ಋಣ ನಿರ್ವಹಣೆ ಮತ್ತು ವಿತ್ತೀಯ ಶಿಸ್ತು ಪಾಲಿಸುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಉತ್ತಮವಾಗಿ ನಿಭಾಯಿಸಿದೆ. ನಮ್ಮ ರಾಜ್ಯದಲ್ಲಿ ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನು ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತರುವ ಮುನ್ನವೇ ಜಾರಿಗೆ ತರಲಾಯಿತು ಎಂದು ಸಿದ್ದರಾಮಯ್ಯ ಬಜೆಟ್‌ ಭಾಷಣದಲ್ಲಿ ತಿಳಿಸಿದರು.

ಅಲ್ಲದೆ, ರಾಜ್ಯದ ಒಟ್ಟು ಹೊಣೆಗಾರಿಕೆಗಳಲ್ಲಿ ಆಯವ್ಯಯದ ಹೊರಗಿನ ಸಾಲಗಳನ್ನು ಪರಿಗಣಿಸಿದ ಮೊದಲ ರಾಜ್ಯ ಕರ್ನಾಟಕ. ಆದಾಗ್ಯೂ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾದ ಕಾರಣ ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್ಗಳು ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸುವಂತಾಯಿತು.

೧೫ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ ರಾಜ್ಯ ಕರ್ನಾಟಕ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ ತೆರಿಗೆ ಪಾಲು ಶೇ. 4.713 ರಿಂದ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.೩.೬47ಕ್ಕೆ ಇಳಿಕೆಯಾಯಿತು. ಇದರಿಂದಾಗಿ ರಾಜ್ಯದ ತೆರಿಗೆ ಹಂಚಿಕೆಯು ಶೇ.೨3ರಷ್ಟು ಕುಸಿತವಾಗಿ, ರಾಜ್ಯವು ವಾರ್ಷಿಕ ಅಂದಾಜು ೧೨ ಸಾವಿರ ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು. ಅಲ್ಲದೆ, ೧೫ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 5,495 ಕೋಟಿ ರೂ.ಗಳ ವಿಶೇಷ ಅನುದಾನ, ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆಗಾಗಿ 3,000 ಕೋಟಿ ರೂ. ಮತ್ತು ಪೆರಿಫೆರಲ್‌ ರಿಂಗ್ ರಸ್ತೆ ಅಭಿವೃದ್ಧಿಗೆ 3,000 ಕೋಟಿ ರೂ. ಸೇರಿ ಒಟ್ಟು 11,495 ಕೋಟಿ ರೂ.ಗಳನ್ನು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತು. ಆದರೆ, ಕೇಂದ್ರ ಸರ್ಕಾರ ಈ ಅನುದಾನವನ್ನು ಬಿಡುಗಡೆ ಮಾಡಿರುವುದಿಲ್ಲ. 2023-24ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ.

ರಾಜ್ಯಗಳಿಗೆ ತೆರಿಗೆ ಹಂಚಿಕೆಯನ್ನು ಹೆಚ್ಚಿಸುವ ಬಗ್ಗೆ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯವು ಪ್ರಬಲವಾಗಿ ತನ್ನ ವಾದವನ್ನು ಪ್ರತಿಪಾದಿಸಿದೆ. ಆರೋಗ್ಯಕರ ಮತ್ತು ಸಾಮರಸ್ಯದ ಆರ್ಥಿಕ ಒಕ್ಕೂಟ ರೂಪಿಸಲು ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಸಮಾನತೆ ಮತ್ತು ದಕ್ಷತೆಯನ್ನು ಆಧರಿಸಿ ಹಂಚಿಕೆ ಮಾಡುವಂತೆ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿದೆ. ಬಲಿಷ್ಠ ಆರ್ಥಿಕತೆ ಹೊಂದಿರುವ ರಾಜ್ಯಗಳು ಬಡ ರಾಜ್ಯಗಳಿಗೆ ನೆರವಾಗಲು ಬದ್ಧರಾಗಿದ್ದರೂ, ಅದು ತನ್ನ ನಾಗರೀಕರ

ಹಿತ ಕಾಯುವಲ್ಲಿ ಅಥವಾ ಆರ್ಥಿಕ ಪ್ರಗತಿಗೆ ಕುಂದುಂಟು ಮಾಡುವಂತಿರಬಾರದು. ಆದಾಯ-ಅಂತರ ಮತ್ತು ತಲಾ ಆದಾಯ ನಿರ್ಧರಿಸುವ ಮಾನದಂಡಗಳಲ್ಲಿಯೂ ಲೋಪಗಳಿರುವ ಹಿನ್ನೆಲೆಯಲ್ಲಿ, ಈ ಮಾನದಂಡಗಳಿಗೆ ಕಡಿಮೆ ಅಂಕ ನೀಡುವಂತೆ ಮನವಿ ಮಾಡಿದ್ದೇವೆ.

ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಕನಿಷ್ಠ ಶೇ.50ರಷ್ಟು ಪಾಲನ್ನು ರಾಜ್ಯಗಳಿಗೆ ನೀಡಬೇಕು ಎಂದು ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯನ್ನು ಖಚಿತಪಡಿಸುತ್ತದೆ. ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಒಟ್ಟು ತೆರಿಗೆ ರಾಜಸ್ವದ ಶೇ.5 ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ವಿಧಿಸಿದರೆ, ಹೆಚ್ಚಿನ ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸಬೇಕು. ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ, ಒಟ್ಟು ತೆರಿಗೆ ಹಂಚಿಕೆಯಲ್ಲಿ ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ಶೇ.60ರಷ್ಟು ಪಾಲನ್ನು ಮರಳಿಸಬೇಕು. ಆದ್ದರಿಂದ, ಹಂಚಿಕೆಯಾಗುವ ತೆರಿಗೆಯಲ್ಲಿ ಇತರೆ ರಾಜ್ಯಗಳ ಪಾಲನ್ನು ಶೇ.40ಕ್ಕೆ ಮಿತಿಗೊಳಿಸಬೇಕು ಎಂದು ನಾವು 16ನೇ ಹಣಕಾಸು ಆಯೋಗಕ್ಕೆ ಒತ್ತಾಯ ಮಾಡಿದ್ದೇವೆ.

ಈ ಸವಾಲುಗಳ ನಡುವೆಯೂ, ರಾಜ್ಯ ಸರ್ಕಾರದ ಸಂಪನ್ಮೂಲ ಕ್ರೊಢೀಕರಣ ಕ್ರಮಗಳಿಂದ ರಾಜಸ್ವ ಸ್ವೀಕೃತಿಗಳು ಉತ್ತಮ ಬೆಳವಣಿಗೆ ಸಾಧಿಸಿದ್ದು, ರಾಜ್ಯದ ಅಭಿವೃದ್ಧಿ ಕುರಿತ ನಮ್ಮ ದೂರದೃಷ್ಟಿಯ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ. 2024-25ನೇ ಸಾಲಿಗೆ ರಾಜಸ್ವ ಸ್ವೀಕೃತಿಗಳು ವಾರ್ಷಿಕ ಶೇ. 10.3 ರಷ್ಟು ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ.

key words: Centre’s non-cooperation, Siddaramaiah, budget

SUMMARY:

Centre’s non-cooperation: Siddaramaiah while presenting budget. We have proposed that at least 50 per cent of the tax share between the Centre and the states should be given to the states. This will ensure equitable distribution of resources between the Centre and states.