ಮುಸ್ಲಿಂ ಪದ ಬಿಟ್ಟು ರಾಜಕೀಯ ಮಾಡಿ: ಹಲಾಲ್ ಬಜೆಟ್ ಎಂದ ಬಿಜೆಪಿಗೆ ಶಾಸಕ ತನ್ವೀರ್ ಸೇಠ್ ಸವಾಲು

ಮೈಸೂರು,ಮಾರ್ಚ್,8,2025 (www.justkannada.in):  ನಿನ್ನೆ ಸಿಎಂ ಸಿದ್ದರಾಮಯ್ಯ ಮಂಡಿಸಿದ 2025-26ನೇ ಸಾಲಿನ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕಿಸಿದ ಬಿಜೆಪಿಗೆ ಶಾಸಕ ತನ್ವೀರ್ ಸೇಠ್ ಸವಾಲು ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ತನ್ವೀರ್ ಸೇಠ್,  ಬಿಜೆಪಿಯವರು ಮುಸ್ಲಿಂ ಪದ ಬಿಟ್ಟು ರಾಜಕೀಯ ಮಾಡಿ. ಮುಸ್ಲಿಂ ಹೆಸರು ಬಳಸದೆ ಸಂಘಟನೆ ಮಾಡಿ. ನಮ್ಮ ಜನರ ಹೆಸರು ಹೇಳಿ ರಾಜಕೀಯ ಮಾಡೋದು ನೀವು. ಇದೇ ನಿಮ್ಮ ಬಂಡವಾಳ. ರಾಷ್ಟ್ರದಲ್ಲಿ ಶೇ 20% ಜನಸಂಖ್ಯೆ ನಾವಿದ್ದೇವೆ. ದೇಶಕ್ಕೆ ನಮ್ಮ ಕೊಡುಗೆಯೂ ಅಪಾರ. ಸ್ವಾತಂತ್ಯ ಸಮಯದಲ್ಲಿ ತ್ಯಾಗ ಬಲಿದಾನ ಮಾಡಿದ್ದೇವೆ ಬ್ರಿಟಿಷರ ಬೂಟು ನೆಕ್ಕಿಲ್ಲ ಎಂದು ಟಾಂಗ್ ಕೊಟ್ಟರು.

ಮುಸ್ಲಿಮರಿಗೆ ಏನಾದರೂ ಘೋಷಣೆ ಆದರೆ ಸಾಕು ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಶುರು ಆಗುತ್ತೆ. ಬಜೆಟ್ ನಲ್ಲಿ ಸರ್ಕಾರ ಎಲ್ಲರಿಗೂ ಒತ್ತು ನೀಡಿದೆ. ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯ ಎಲ್ಲದಕ್ಕೂ ಕೂಡ ಹಣ ನೀಡಿದೆ. ಬಿಜೆಪಿ ಅವರು ಏನು ಬೇಕಾದರೂ ಹೇಳಲಿ. ರಾಜ್ಯ ಅಭಿವೃದ್ಧಿಗೆ ಬಜೆಟ್ ಪೂರಕವಾಗಿದೆ. ಹಲಾಲ್ ಅಂತ ಆದರೂ ಹೇಳಲಿ ನಾವೇನು ಬೇಜಾರ್ ಮಾಡಿಕೊಳ್ಳೋದಿಲ್ಲ. ಈ ದೇಶ ನಮ್ಮದು. ಅವರಷ್ಟೇ ನಮಗೂ ಕೂಡ ಹಕ್ಕಿದೆ. ದೇಶದ ಅಭಿವೃದ್ಧಿಗೆ ನಾವು ಸದಾ ಇರುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

Key words: MLA, Tanveer Sait, challenges, BJP, halal budget