ನೇರ ಪಾವತಿ ವೇತನ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಪೌರ ಕಾರ್ಮಿಕರಿಂದ ಪ್ರತಿಭಟನೆ

ಮೈಸೂರು,ಮಾರ್ಚ್,11,2025 (www.justkannada.in): ನೇರ ಪಾವತಿ ವೇತನ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ಜಿಲ್ಲಾ ಪೌರ ಕಾರ್ಮಿಕರ ಸಂಘಟನೆ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜು ನೇತೃತ್ವದಲ್ಲಿ ಪೌರ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿದ್ದು, ಬಜೆಟ್ ನಲ್ಲಿ ಪೌರ ಕಾರ್ಮಿಕರನ್ನು ಕಡೆ ಗಣನೆ ಮಾಡಲಾಗಿದೆ. ನೇರ ವೇತನದ ಭರವಸೆ ನೀಡಿದ್ದ ಸರ್ಕಾರ ಅದರ ಬಗ್ಗೆ ಚಕಾರ ಎತ್ತಿಲ್ಲ. ಸರ್ಕಾರ ಬಜೆಟ್ ನಲ್ಲಿ ನಮ್ಮ ಸಮಸ್ಯೆ ಪ್ರಸ್ತಾಪವನ್ನೇ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾನಿರತ ಪೌರಕಾರ್ಮಿಕರು ತಮ್ಮ‌ ಬೇಡಿಕೆಗಳ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಹಾಗೆಯೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಕೆ ಮಾಡಿದರು. ಪ್ರತಿಭಟನೆಯಲ್ಲಿ ನೂರಾರು ಪೌರ ಕಾರ್ಮಿಕರು ಭಾಗಿಯಾಗಿದ್ದರು.

Key words: Protest, civic workers, fulfillment, various demands, mysore